ಕಾಂಗ್ರೆಸ್ ಮುಖಂಡನ ಮನೆ, ಕಚೇರಿ ಮೇಲೆ ಐಟಿ ದಾಳಿ ಮಂಗಳೂರು: ಕಾಂಗ್ರೆಸ್ ಮುಖಂಡ, ಉದ್ಯಮಿ ವಿವೇಕ್ ರಾಜ್ ಪೂಜಾರಿಯ ಅವರ 2 ಮನೆ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ (Income Tax) ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶನಿವಾರ ಬೆಳಗ್ಗೆ 7 ಗಂಟೆಗೆ ರಾಜ್ಯದ ಬೇರೆ ಬೇರೆ ಕಡೆಯ 14 ಮಂದಿ ಅಧಿಕಾರಿಗಳು ವಿವೇಕ್ ರಾಜ್ ಪೂಜಾರಿಗೆ ಸೇರಿದ ಎರಡು ಮನೆಗಳ ಮೇಲೆ ದಾಳಿ ನಡೆಸಿದರು. ಅತ್ತಾವರ ಮತ್ತು ಮಣ್ಣಗುಡ್ಡೆಯಲ್ಲಿರುವ ಎರಡು ಮನೆಗೆ ಹಾಗೂ ವಿವೇಕನಗರದಲ್ಲಿರುವ ಕಚೇರಿಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ವಿವೇಕ್ ರಾಜ್ ಪೂಜಾರಿ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸ್ಪರ್ಧಿಸುವ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಉಸ್ತುವಾರಿಯ ಜವಾಬ್ದಾರಿ ವಹಿಸಿದೆ. ಅದರಂತೆ ಅವರು ಚಿಕ್ಕಮಗಳೂರು ಕ್ಷೇತ್ರದಾದ್ಯಂತ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದಾರೆ.
ಐಟಿ ಕಾರ್ಯಾಚರಣೆ:ರಾಜ್ಯದಲ್ಲಿ ಐಟಿ ಇಲಾಖೆ ಇತ್ತೀಚೆಗೆ ಭರ್ಜರಿ ಕಾರ್ಯಾಚರಣೆ ನಡೆಸಿತ್ತು. ರಾಜ್ಯದ ವಿವಿಧ ಕೋ ಆಪರೇಟಿವ್ ಬ್ಯಾಂಕ್ಗಳು ಚೆಕ್ ಡಿಸ್ಕೌಂಟ್ ಮೂಲಕ ಸುಮಾರು 1,000 ಕೋಟಿ ರೂ. ಅಧಿಕ ಮೊತ್ತವನ್ನು ಸಂಶಯಾಸ್ಪದವಾಗಿ ಪಾವತಿ ಮಾಡಿರುವ ಪ್ರಕರಣವನ್ನು ಐಟಿ ಇಲಾಖೆ ಪತ್ತೆ ಮಾಡಿತ್ತು. ''ಮಾರ್ಚ್ 31 ರಂದು ರಾಜ್ಯದ ಕೆಲ ಕೋ ಆಪರೇಟಿವ್ ಬ್ಯಾಂಕುಗಳಲ್ಲಿ ಶೋಧ ಕಾರ್ಯ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸುಮಾರು 16 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಈ ಅಕ್ರಮ ಪಾವತಿಯನ್ನು ಪತ್ತೆ ಹಚ್ಚಲಾಗಿದೆ'' ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿತ್ತು.
ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಉದ್ದಿಮೆ ಸಂಸ್ಥೆಗಳಿಂದ ನಕಲಿ ವಹಿವಾಟು.. ಸಿಬಿಡಿಟಿ ಮಾಹಿತಿ ಪ್ರಕಾರ, ಶೋಧ ಕಾರ್ಯ ವೇಳೆ ನಕಲಿ ವಹಿವಾಟಿನ ಅನೇಕ ದಾಖಲಾತಿಗಳು ಪತ್ತೆಯಾಗಿವೆ. ಕೋಪರೇಟಿವ್ ಬ್ಯಾಂಕ್ ಗಳು ವಿವಿಧ ಸಂಸ್ಥೆಗಳ ಚೆಕ್ ಗಳನ್ನು ನಕಲಿ ಸಂಸ್ಥೆಗಳ ಹೆಸರುಗಳಲ್ಲಿ ಡಿಸ್ಕೌಂಟ್ ಮಾಡಿ ಪಾವತಿ ಮಾಡುತ್ತಿರುವುದು ದಾಖಲೆಗಳಿಂದ ಪತ್ತೆಯಾಗಿವೆ. ಚೆಕ್ ಡಿಸ್ಕೌಂಟ್ ವೇಳೆ ಯಾವುದೇ ಕೆವೈಸಿ ನಿಯಮವನ್ನು ಅನುಸರಿಸಿಲ್ಲ. ಚೆಕ್ ಡಿಸ್ಕೌಂಟ್ ಮಾಡಿ ಆ ಮೊತ್ತವನ್ನು ವಿವಿಧ ಕೋ-ಆಪರೇಟಿವ್ ಸೊಸೈಟಿಗಳ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಲಾಗುತ್ತಿತ್ತು. ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಉದ್ದಿಮೆ ಸಂಸ್ಥೆಗಳು ಈ ರೀತಿಯ ನಕಲಿ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದವು.
ಇದನ್ನೂ ಓದಿ:ಐಟಿ ಕಾರ್ಯಾಚರಣೆ: ನಕಲಿ ವೆಚ್ಚ ತೋರಿಸಿ ಕೋ ಆಪರೇಟಿವ್ ಬ್ಯಾಂಕುಗಳಿಂದ 1000 ಕೋಟಿ ರೂ. ಪಾವತಿ!
ಅನಿರುದ್ ದೇಶಪಾಂಡೆ ಕಚೇರಿ ಮೇಲೆ ಐಟಿ ದಾಳಿ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರ ಆಪ್ತ ಹಾಗೂ ಖ್ಯಾತ ಉದ್ಯಮಿಯಾಗಿರುವ ಅನಿರುದ್ಧ ದೇಶಪಾಂಡೆ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಸಿಟಿ ಗ್ರೂಪನ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಮನೋರಾ ಟೌನ್‌ಶಿಪ್‌ನ ಪ್ರವರ್ತಕರಾಗಿರುವ ಅನಿರುದ್ಧ ಅವರಿಗೆ ಸೇರಿದ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳಿಂದ ದಾಳಿ ನಡೆಸಲಾಗಿತ್ತು.
ಇದನ್ನೂ ಓದಿ:ಶರದ್ ಪವಾರ್ ಆಪ್ತ ಉದ್ಯಮಿ ಅನಿರುದ್ ದೇಶಪಾಂಡೆ ಕಚೇರಿ ಮೇಲೆ ಐಟಿ ದಾಳಿ..