ಮಂಗಳೂರು:75 ವರ್ಷ ದಾಟಿದವರಿಗೆ ಬಿಜೆಪಿ ಯಿಂದ ಟಿಕೆಟ್ ಇಲ್ಲ ಎಂಬ ಚರ್ಚೆಯ ನಡುವೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಅಚ್ಚರಿಯ ಹೇಳಿಕೆ ನೀಡಿದರು. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯಾಕೆ ನಾನೇ ನಿಲ್ಲಬೇಕು. ನನ್ನಿಂದಾಗಿ ಬಿಜೆಪಿ ಇಲ್ಲ. 150 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದ್ದು, ನಾನು ಶಾಸಕನಾಗುತ್ತೇನೆ ಎಂಬುದು ಬೇರೆ ವಿಚಾರ ಎಂದು ಹೇಳಿದರು.
75 ವರ್ಷ ದಾಟಿದವರಿಗೆ ಟಿಕೆಟ್ ಇಲ್ಲ ಎಂಬ ವಿಚಾರ ಬಿಜೆಪಿ ಸಂವಿಧಾನದಲ್ಲಿ ಇಲ್ಲ. ಹೊರಟ್ಟಿಯವರಿಗೆ 77 ವರ್ಷ ಆದರೂ ಟಿಕೆಟ್ ನೀಡಲಾಗಿದೆ. ನನಗೆ ಟಿಕೆಟ್ ಸಿಗುವುದು ಮಹತ್ವ ಅಲ್ಲ. ಚುನಾಯಿತ ಪ್ರತಿನಿಧಿಯಾಗಿ ಕೆಲಸ ಮಾಡದೇ ಸಾಮಾಜಿಕ ಸೇವೆ ಮಾಡಬಹುದು. ಪಕ್ಷ ನಿಲ್ಲಬೇಕೆಂದು ಹೇಳಿದರೆ ಚುನಾವಣೆಗೆ ನಿಲ್ಲುತ್ತೇನೆ. ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ಬಿಜೆಪಿ ಪಕ್ಷದಿಂದ ಸರ್ವೆ ನಡೆಯುತ್ತಿದೆ. 224 ಕ್ಷೇತ್ರಗಳಲ್ಲೂ ಸರ್ವೆ ನಡೆಯುತ್ತಿದ್ದು, ಗೆಲ್ಲುವ ಮಾನದಂಡದಲ್ಲಿ ಟಿಕೆಟ್ ಸಿಗಲಿದೆ. ಬಿಜೆಪಿಯಲ್ಲಿ ಯಾರಿಗೂ ವಯಸ್ಸಾಗುವುದಿಲ್ಲ ಎಂದರು.
ರಾಜಕೀಯ ಸಂನ್ಯಾಸ :ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗದಿದ್ದರೆ ಜೀವನಪೂರ್ತಿ ಕಾಂಗ್ರೆಸ್ ಕಾರ್ಯಕರ್ತನಾಗಿ ಇರುತ್ತೇನೆ ಎಂದು ಹೇಳಿದರೆ, ನಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದರು.
ಕೆಂಪಣ್ಣ ಕಾಂಗ್ರೆಸ್ ಏಜೆಂಟ್ :ಬಿಜೆಪಿ ಮೇಲೆ ಭ್ರಷ್ಟಾಚಾರ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಮೇಲೆ ಜನಸಾಮಾನ್ಯರು ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನೆಯಲ್ಲಿ ಕೋಟಿಗಟ್ಟಲೆ ಹಣ ಸಿಕ್ಕಿದೆ. ದೆಹಲಿ ಬಂಗಲೆಯಲ್ಲಿ ಕೂಡ ಹಣ ಸಿಕ್ಕಿದೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲ್ಗೆ ಹೋಗಿ ಬಂದಿದ್ದು, ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಡಿಕೆಶಿ ವಿರುದ್ದ ಗುಡುಗಿದರು.