ಕರ್ನಾಟಕ

karnataka

ETV Bharat / state

ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗೆ ಉಚಿತ ಇಂಟರ್​ನೆಟ್ ವ್ಯವಸ್ಥೆ: ಮಠಂದೂರು - System of Puttur Internet Center

ಕೊರೊನಾ ಹಿನ್ನೆಲೆ ಮನೆಯಿಂದಲೇ ಕೆಲಸ ನಿರ್ವಹಿಸುವ ಐಟಿ-ಬಿಟಿ ಉದ್ಯೋಗಿಗಳಿಗೆ ಪುತ್ತೂರು ನಗರದಲ್ಲಿ ಉಚಿತವಾಗಿ ಇಂಟರ್‌ನೆಟ್ ಕೇಂದ್ರದ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

IT, BT Work From Home Free System in Muttur
ಐಟಿ, ಬಿಟಿ ವರ್ಕ್ ಫ್ರಂ ಹೋಂಗೆ ಪುತ್ತೂರಿನಲ್ಲಿ ಉಚಿತ ವ್ಯವಸ್ಥೆ: ಮಠಂದೂರು

By

Published : Aug 3, 2020, 4:16 PM IST

Updated : Aug 3, 2020, 4:22 PM IST

ಪುತ್ತೂರು(ದಕ್ಷಿಣ ಕನ್ನಡ): ಕೊರೊನಾ ಹಿನ್ನೆಲೆ ಮನೆಯಿಂದಲೇ ಕೆಲಸ(ವರ್ಕ್ ಫ್ರಂ ಹೋಂ) ನಿರ್ವಹಿಸುತ್ತಿರುವ ಐಟಿ-ಬಿಟಿ ಉದ್ಯೋಗಿಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಪುತ್ತೂರು ನಗರದಲ್ಲಿ ಇಂಟರ್‌ನೆಟ್ ಕೇಂದ್ರದ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ನಿಂದಾಗಿ ಉದ್ಭವಿಸಿರುವ ಸಮಸ್ಯೆಯಿಂದ ಅನೇಕರು ಸಂಕಷ್ಟಕ್ಕೀಡಾಗಿದ್ದಾರೆ. ಉದ್ಯೋಗ ಸಮಸ್ಯೆ ಹಲವರನ್ನು ಕಾಡುತ್ತಿದೆ. ಈ ನಡುವೆ ಐಟಿ-ಬಿಟಿಯಲ್ಲಿ ಕೆಲಸ ಮಾಡುತ್ತಿರುವ ಹಲವರು ಊರಿಗೆ ಬಂದು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ.

ಪುತ್ತೂರಿನಲ್ಲಿ ಉಚಿತ ಇಂಟರ್​ನೆಟ್ ವ್ಯವಸ್ಥೆ: ಶಾಸಕ ಮಠಂದೂರು

ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಅವರಿಗೆ ಕೆಲಸ ನಿರ್ವಹಣೆಗೆ ತೊಡಕಾಗುತ್ತಿದೆ. ಇದಕ್ಕಾಗಿ ಗುಡ್ಡ ಹತ್ತುವ, ನಗರಕ್ಕೆ ಹಾಗೂ ಸಂಬಂಧಿಕರ ಮನೆಗೆ ಹೋಗಿ ನೆಟ್‌ವರ್ಕ್ ಪಡೆದು ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ಅವರಿಗೆ ಸಹಕಾರವಾಗುವ ನಿಟ್ಟಿನಲ್ಲಿ ಮುಳಿಯ ಸಂಸ್ಥೆಯ ಆಡಳಿತ ನಿರ್ದೇಶಕರಾದ ಕೇಶವ ಪ್ರಸಾದ್ ಮುಳಿಯ ಮತ್ತು ಕೃಷ್ಣ ನಾರಾಯಣ ಮುಳಿಯ ಅವರ ಸಹಕಾರದಲ್ಲಿ ಉಚಿತವಾಗಿ ಒಂದು ತಿಂಗಳ ವ್ಯವಸ್ಥೆಯನ್ನು ಮುಳಿಯ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆಸಕ್ತ 50 ಮಂದಿಗೆ ಇಲ್ಲಿ ಉಚಿತ ವೈಫೈ, ಎಸಿ, ಕಾನ್ಫರೆನ್ಸ್ ಹಾಲ್, ಕಾಫಿ, ಟೀ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಮಾಡಲಾಗುವುದು ಎಂದು ಹೇಳಿದರು.

ಪುತ್ತೂರಿನಲ್ಲಿ ಐಟಿ ಕಂಪೆನಿಯನ್ನು ಸ್ಥಾಪಿಸುವ ಕುರಿತು ಸಚಿವ ಜಗದೀಶ್ ಶೆಟ್ಟರ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅಲ್ಲದೆ ಕೇಂದ್ರ ಸರ್ಕಾರದ ಸೀ ಫುಡ್ ಯೋಜನೆಯಡಿ 50 ಎಕರೆ ಜಮೀನು ಕಾದಿರಿಸುವ ಕುರಿತು ಪ್ರಸ್ತಾಪ ಕಳುಹಿಸಲಾಗಿದೆ. ಪುತ್ತೂರು ಉಪ್ಪಿನಂಗಡಿ ರಸ್ತೆಯ ನಡುವೆ ಇಂಡಸ್ಟ್ರಿಯಲ್ ಲೇಔಟ್ ಸ್ಥಾಪನೆ, ಉದ್ಯೋಗ ಮಿತ್ರ ಯೋಜನೆಯಡಿ ಯುವಕರಿಗೆ ಉದ್ಯೋಗಗಳ ಸೃಷ್ಟಿ, ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರಸ್ತುತ​ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ಮುಳಿಯ ಸಂಸ್ಥೆಯ ಕೇಶವ ಪ್ರಸಾದ್ ಮುಳಿಯ ಉಪಸ್ಥಿತರಿದ್ದರು.

Last Updated : Aug 3, 2020, 4:22 PM IST

ABOUT THE AUTHOR

...view details