ಕರ್ನಾಟಕ

karnataka

ETV Bharat / state

ಇಸ್ರೇಲ್‌ನಲ್ಲಿ ಸಿಲುಕಿದ ದಕ್ಷಿಣ ಕನ್ನಡ ಜಿಲ್ಲೆಯ ಹಲವರು; ಕುಟುಂಬಸ್ಥರಲ್ಲಿ ಆತಂಕ

ಇಸ್ರೇಲ್​ ಮತ್ತು ಪ್ಯಾಲೆಸ್ಟೀನ್‌ನ ಹಮಾಸ್​ ಉಗ್ರರ ನಡುವಿನ ಯುದ್ಧ ಮುಂದುವರೆದಿದ್ದು, ಭಾರತದ ಹಲವರು ಇಸ್ರೇಲ್‌ನಲ್ಲಿ ಸಿಲುಕಿದ್ದಾರೆ. ಕರ್ನಾಟಕದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದವರೂ ಅಲ್ಲಿದ್ದು ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.

By ETV Bharat Karnataka Team

Published : Oct 9, 2023, 3:56 PM IST

Updated : Oct 9, 2023, 4:52 PM IST

Etv Bharat
Etv Bharat

ಇಸ್ರೇಲ್-ಪ್ಯಾಲೆಸ್ಟೀನ್ ಸಂಘರ್ಷ: ಸಂಕಷ್ಟದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಹಲವರು

ಮಂಗಳೂರು: ಇಸ್ರೇಲ್ ಮತ್ತು ಪ್ಯಾಲೆಸ್ಟೀನ್‌ ನಡುವೆ ಸಮರ ಮುಂದುವರೆದಿದೆ. ಈಗಾಗಲೇ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಭಾರತೀಯ ರಾಯಭಾರಿ ಕಚೇರಿ ಇಸ್ರೇಲ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದೆ. ಅಲ್ಲಿನ ಸರ್ಕಾರದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದೆ. ರಾಕೆಟ್​ ದಾಳಿ ನಡೆಯುತ್ತಿದ್ದು ಹೊರಗಡೆ ತೆರಳದಂತೆ ಹೇಳಲಾಗಿದ್ದು, ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸಲಹೆ ನೀಡಲಾಗಿದೆ.

ಉದ್ಯೋಗ ನಿಮಿತ್ತ ಸಾವಿರಾರು ಭಾರತೀಯರು ಇಸ್ರೇಲ್​ನಲ್ಲಿ ನೆಲೆಸಿದ್ದಾರೆ. ರಾಜ್ಯದ ಕರಾವಳಿ ಜಿಲ್ಲೆಗಳಿಂದಲೂ ಸಾಕಷ್ಟು ಮಂದಿ ವಿವಿಧ ಕೆಲಸದ ಕಾರಣಕ್ಕೆ ಇಸ್ರೇಲಿನಲ್ಲಿ ಬದುಕು ಕಂಡುಕೊಂಡಿದ್ದಾರೆ. ಇದೀಗ ಭೀಕರ ಯುದ್ಧ ನಡೆಯುತ್ತಿರುವುದರಿಂದ ಅವರ ಕುಟುಂಬಸ್ಥರಿಗೆ ಆತಂಕ ಶುರುವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವರು ಹೋಮ್ ನರ್ಸ್ ಆಗಿ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರೂ ಯುದ್ಧಪೀಡಿತ ಪ್ರದೇಶದ ಸುತ್ತಮುತ್ತಲಿದ್ದರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಪುರುಷರು, ಮಹಿಳೆಯರು ಸಮಾನ ಸಂಖ್ಯೆಯಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ 16 ವರ್ಷಗಳಿಂದ ಟಲ್ ಅವೀವ್‌ನಲ್ಲಿ ಮಂಗಳೂರಿನ ದಾಮಸ್ ಕಟ್ಟೆಯ ನಿವಾಸಿಯಾಗಿರುವ ಪ್ರವೀಣ್ ಪಿಂಟೋ ಕುಟುಂಬ ವಾಸಿಸುತ್ತಿದೆ. ಅದೇ ರೀತಿ ಲೆನಾರ್ಡ್ ಫರ್ನಾಂಡೀಸ್ ಅವರು ಕಳೆದ 14 ವರ್ಷಗಳಿಂದ ಉದ್ಯೋಗ ಮಾಡುತ್ತಿದ್ದಾರೆ. ದೂರವಾಣಿ ಮೂಲಕ ಇವರುಗಳ ಸುರಕ್ಷತೆಯ ಬಗ್ಗೆ ಕುಟುಂಬ ವಿಚಾರಣೆ ನಡೆಸುತ್ತಲೇ ಇದೆ. ಈ ಇಬ್ಬರೂ ಬಂಕರ್​​ಗಳಲ್ಲಿ ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಮನೆಯಿಂದ ಹೊರಬಾರದಂತೆ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಪ್ರವೀಣ್ ಪಿಂಟೋ ಪತ್ನಿ ನೀತಾ ಸಲ್ಡಾನ ಮಾತನಾಡಿ, "ನನ್ನ ಗಂಡ 16 ವರ್ಷಗಳಿಂದ ಇಸ್ರೇಲ್​ನಲ್ಲಿ ನೆಲೆಸಿದ್ದಾರೆ. ಪ್ರತಿ ಅರ್ಧ ಗಂಟೆಗೊಮ್ಮೆ ಅವರಲ್ಲಿ ಅಲ್ಲಿನ ಪರಿಸ್ಥಿತಿ ಬಗ್ಗೆ ವಿಚಾರಿಸುತ್ತಿದ್ದೇನೆ. ಅವರು ಸುರಕ್ಷಿತ ಪ್ರದೇಶದಲ್ಲಿದ್ದಾರೆ. ಸರಕಾರದ ಮಾರ್ಗದರ್ಶನವನ್ನು ಪಾಲಿಸುತ್ತಿದ್ದಾರೆ. ವೃಥಾ ಹೊರಗಡೆ ಹೋಗುತ್ತಿಲ್ಲ. ರಾಕೆಟ್​ ದಾಳಿ ಆಗುವಾಗ ಸೈರನ್‌ ಆಗುತ್ತದೆ. ಈಗ ಬಾಂಬ್ ಶೆಲ್ಟರ್​ನಲ್ಲಿ ಆಶ್ರಯ ಪಡೆಯುತ್ತಿದ್ದಾರೆ" ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರ ಜಿಲ್ಲಾಧಿಕಾರಿ ಆನಂದ್ ಪ್ರತಿಕ್ರಿಯಿಸಿ, "ಇಸ್ರೇಲ್​​ನಲ್ಲಿ ಸಿಲುಕಿರುವ ಜಿಲ್ಲೆಯ ಜನರ ಮಾಹಿತಿ ಇನ್ನಷ್ಟೇ ರಾಜ್ಯ ಸರಕಾರದಿಂದ ಬರಬೇಕಿದೆ" ಎಂದರು.

ಇದನ್ನೂ ಓದಿ :ಹಮಾಸ್​ ದಾಳಿಗೆ ಇಸ್ರೇಲ್ ಪ್ರತೀಕಾರ: 400ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರ ಸಾವು

Last Updated : Oct 9, 2023, 4:52 PM IST

ABOUT THE AUTHOR

...view details