ಕರ್ನಾಟಕ

karnataka

ETV Bharat / state

ಪಂಜ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ನಡೆಯಿತೇ ಪವಾಡ..? - ಪಂಜದಲ್ಲಿರುವ ದೇಗುಲ

ಸುಳ್ಯ ತಾಲೂಕಿನ ತುಳುನಾಡಿನ ಇತಿಹಾಸ ಪ್ರಸಿದ್ಧ ಸಾವಿರ ಸೀಮೆಯ ಒಡೆಯನಾಗಿರುವ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ಪವಾಡವೊಂದು ನಡೆದಿದೆ ಎಂಬ ವದಂತಿ ಸಾರ್ವಜನಿಕ ವಲಯದಲ್ಲಿ ಹಬ್ಬಿದೆ.

ಪಂಜ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ನಡೆಯಿತೇ ಪವಾಡ..?

By

Published : Oct 10, 2019, 4:57 AM IST

ಮಂಗಳೂರು/ಸುಳ್ಯ:ಸುಳ್ಯ ತಾಲೂಕಿನ ಪಂಜದಲ್ಲಿರುವ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿರುವ ಅಮ್ಮನವರ ಗುಡಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ನವರಾತ್ರಿಯ ಒಂಭತ್ತು ದಿನ ವಿಶೇಷ ಪೂಜೆಗಳನ್ನು ನಡೆಸಲಾಗಿತ್ತು.

ಆದರೆ ದಿನಾಂಕ 7/10/ 2019ನೇ ಸೋಮವಾರ ಒಂಬತ್ತನೇ ದಿನದ ಆಯುಧ ಪೂಜೆಯ ಪ್ರಯುಕ್ತ ಬೆಳಗ್ಗಿನಿಂದಲೇ ದೇವಳದಲ್ಲಿ ಪ್ರಧಾನ ದೇವರಿಗೆ ಹಾಗೂ ಅಮ್ಮನವರಿಗೆ ವಿಶೇಷ ಪೂಜೆಗಳು ಮತ್ತು ವಾಹನ ಪೂಜೆಗಳು ರಾತ್ರಿಯವರೆಗೂ ನಡೆದಿತ್ತು. ಭಕ್ತಾದಿಗಳು ಶ್ರೀದೇವರ ದರುಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿ ತೆರಳಿದ್ದರು. ಆಡಳಿತ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರೂ ಕೂಡ ರಾತ್ರಿ 12 ಗಂಟೆಗೆ ಮನೆಗೆ ತೆರಳಿದ್ದಾರೆ. ಇದಾದ ನಂತರ ಮಧ್ಯರಾತ್ರಿ 1.30ರ ಸಮಯಕ್ಕೆ ಸರಿಯಾಗಿ ದೇಗುಲದ ಒಳಗಡೆ ಡೋಳು ಹಾಗೂ ಜಯಗಂಟೆ ಬಾರಿಸುವ ಶಬ್ದ ಕೇಳಿ ಬಂದಿದೆ ಎನ್ನಲಾಗಿದೆ.

ತಕ್ಷಣ ದೇಗುಲದ ಭದ್ರತಾ ಸಿಬ್ಬಂದಿ ಈ ವಿಷಯವನ್ನು ಆಡಳಿತ ಮಂಡಳಿಯ ಅಧಿಕಾರಿಯಾಗಿರುವ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ಅರ್ಚಕರಿಗೆ ತಿಳಿಸಿದ್ದಾರೆ. ಕೂಡಲೇ ಅವರು ಕ್ಷೇತ್ರಕ್ಕೆ ಆಗಮಿಸಿ ಪ್ರಧಾನ ಬಾಗಿಲು ತೆರೆದು ಒಳಗಡೆಗೆ ಬಂದು ನೋಡುವಾಗ ಡೋಳು ಹಾಗೂ ಜಯಗಂಟೆ ಬಾರಿಸುತ್ತಿರುವುದು ಕಂಡು ಬಂದಿದೆಯಂತೆ. ಈ ವೇಳೆ ಹನ್ನೆರಡು ಸ್ವಿಚ್​ಗಳು ಇರುವ ಇಲೆಕ್ಟ್ರಿಕ್ ಬೋರ್ಡ್​ನಲ್ಲಿ, ಇನ್ಸ್​ಟ್ರುಮೆಂಟ್ ಇರುವ ಸ್ವಿಚ್ ಮಾತ್ರ ಆನ್ ಆಗಿದ್ದು, ಬೇರೆ ಯಾವುದೇ ಸ್ವಿಚ್​ಗಳು ಆನ್ ಆಗಿರಲಿಲ್ಲ ಎನ್ನಲಾಗಿದೆ. ದೇಗುಲದಲ್ಲಿ ಮಧ್ಯಾಹ್ನದ ಮಹಾಪೂಜೆ ಮತ್ತು ರಾತ್ರಿ ಪೂಜೆಗೆ ಮಾತ್ರ ಈ ಇಲೆಕ್ಟ್ರಿಕ್ ಸಾಧನವನ್ನು ಬಳಸಲಾಗುತ್ತಿದ್ದು, ಕಾಕತಾಳೀಯ ಎಂಬಂತೆ ಆ ದಿನ ಎರಡು ಹೊತ್ತಲ್ಲಿ ನಡೆದ ಪೂಜೆಗೂ ಈ ಎಲೆಕ್ಟ್ರಿಕ್ ಯಂತ್ರ ಬಳಸಿಲ್ಲ ಎನ್ನಲಾಗುತ್ತಿದೆ.

ಈ ಸೋಜಿಗವನ್ನು ಕಂಡ ಆಡಳಿತ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಶ್ರೀ ದೇವರ ಸನ್ನಿಧಾನದಲ್ಲಿ ಮತ್ತು ಅಮ್ಮನವರ ಗುಡಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಡೋಳು ಹಾಗೂ ಜಯಗಂಟೆಯ ಸ್ವಿಚ್ ಆಫ್ ಮಾಡಿ ಮತ್ತೆ ಮನೆಗೆ ತೆರಳಿದ್ದಾರೆ. ನಂತರ ದೇಗುಲದ ಸಿ.ಸಿ ಕ್ಯಾಮರಾ ಪರಿಶೀಲಿಸಿದಾಗ ಯಾವುದೋ ಒಂದು ಬೆಳಕು ಹಾಗೂ ಬಿಳಿ ಪಕ್ಷಿಯೊಂದು ಹಾರಾಡಿರುವುದು ಕಂಡು ಬಂದಿದೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಈ ಕ್ಷೇತ್ರದಲ್ಲಿ ವಿಶೇಷ ಒಂದು ಘಟನೆ ನಡೆದಿದ್ದು, ನಂಬುವವರಿಗೆ ಮಾತ್ರ ಇದರ ಮಹತ್ವ ತಿಳಿಯುವುದು ಎಂಬುದಾಗಿ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು ಅವರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details