ಬಂಟ್ವಾಳ(ದ.ಕ):ಕೊರೊನಾ ಎರಡನೇ ಅಲೆ ಅಧಿಕವಾಗಿರುವ ಹೊತ್ತಿನಲ್ಲಿ ಲಾಕ್ಡೌನ್ ನಿಂದಾಗಿ ಹಸಿವಿನಿಂದ ಕಂಗೆಟ್ಟ ಬಂಟ್ವಾಳದ ನಿರ್ಗತಿಕರಿಗೆ ಆಸರೆಯಾದವರು ಪರ್ಲಿಯಾ ಇಕ್ಬಾಲ್. ವೃತ್ತಿಯಲ್ಲಿ ಪುರಸಭೆಯ ಇಂಜಿನಿಯರ್ ಸಹಾಯಕರಾಗಿರುವ ಇಕ್ಬಾಲ್ ಮೂಲತಃ ಸಮಾಜಸೇವಕರು.
ಬಂಟ್ವಾಳ, ಬಿ.ಸಿ.ರೋಡಿನಲ್ಲಿ ಅನಾಥವಾಗಿರುವ ನಿರ್ಗತಿಕರು, ಭಿಕ್ಷಕುಕರಿಗೆ ಸದ್ಯ ಇವರೇ ಅನ್ನದಾತರು. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿರುವ ಸುಮಾರು 14 ಮಂದಿ ನಿರ್ಗತಿಕರು, ಭಿಕ್ಷುಕರಿಗೆ ರಾತ್ರಿ ಕರ್ಫ್ಯೂ ಆರಂಭವಾದಾಗಿನಿಂದ ಅವರ ಜಾತಿ, ಧರ್ಮ ಯಾವುದನ್ನೂ ಕೇಳದೆ ಪ್ರತೀ ದಿನ ಮಧ್ಯಾಹ್ನ ಹಾಗೂ ರಾತ್ರಿಯ ಅನ್ನಹಾರ ನೀಡಿ ಮಾನವೀಯ ಧರ್ಮ ಮೆರೆಯುತ್ತಿದ್ದಾರೆ.
ಕೊರೊನಾ ಮಹಾಮಾರಿಯ ಎರಡನೇ ಅಲೆಯು ಅಬ್ಬರಿಸುತ್ತಿರುವ ಕಠಿಣ ಸಮಯದಲ್ಲಿ ಸರಕಾರ ಘೋಷಿಸಿರುವ ಕೋವಿಡ್ ಲಾಕ್ಡೌನ್ನಿಂದ ಅನ್ನಹಾರವಿಲ್ಲದೇ ಪರದಾಡುತ್ತಿದ್ದ ಬಡ ನಿರ್ಗತಿಕ ಭಿಕ್ಷುಕರನ್ನು ಕಂಡು ಮರುಗಿದ ಇಕ್ಬಾಲ್ ಅವರು ತಮ್ಮ ಮನೆಯಲ್ಲೇ ಅನ್ನಹಾರ ತಯಾರಿಸಿ ಭಿಕ್ಷುಕರು, ನಿರ್ಗತಿಕರನ್ನು ಹುಡುಕಿ ಅವರಿಗೆ ಅನ್ನಹಾರ ನೀಡಿ ಅವರ ಹೊಟ್ಟೆ ತುಂಬಿಸುತ್ತಾರೆ. ಅವರ ಯೋಗ ಕ್ಷೇಮವನ್ನು ವಿಚಾರಿಸುತ್ತಿದ್ದಾರೆ. ನಿತ್ಯ ಮಧ್ಯಾಹ್ನ, ರಾತ್ರಿ ಊಟವನ್ನು ನಿರ್ಗತಿಕರಿಗೆ ನೀಡುವುದರ ಜೊತೆಗೆ ಬಸ್ ತಂಗುದಾಣ, ರಸ್ತೆ ಬದಿಯಲ್ಲಿ ಹೊಟ್ಟೆಗಿಲ್ಲದೇ ಬಿದ್ದಿರುವ ಬೀದಿನಾಯಿಗಳ ಸಹಿತ ಕಣ್ಣಿಗೆ ಸಿಗುವ ಇತರ ಪ್ರಾಣಿಗಳಿಗೂ ಒಂದಷ್ಟು ಬೇಕರಿ ತಿನಸುಗಳನ್ನು ಹಾಕಿ ಅವುಗಳ ಹೊಟ್ಟೆಯನ್ನು ತುಂಬಿಸುತ್ತಿದ್ದಾರೆ.
ಕಳೆದ ವರ್ಷವೂ ನೆರವಾಗಿದ್ದರು:
ಕಳೆದ ವರ್ಷವೂ ಲಾಕ್ಡೌನ್ ಸಮಯದಲ್ಲಿ ಕೋವಿಡ್ ವಾರಿಯರ್ ಆಗಿ ಯಾವುದೇ ಪ್ರಚಾರವನ್ನು ಬಯಸದೇ ಪುರಸಭಾ ವ್ಯಾಪ್ತಿಯ ಹಲವು ಬಡಮನೆಗಳಿಗೆ ವೈಯಕ್ತಿಕ ನೆಲೆಯಲ್ಲಿ ಅಕ್ಕಿ ,ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿ, ನೆರವಾಗಿದ್ದರು. ಇವರ ಸೇವೆಗೆ ಅಕ್ಕಂದಿರು ಮತ್ತು ಭಾವ ಸಾಥ್ ನೀಡಿ ಸಹಕರಿಸುತ್ತಿದ್ದಾರೆ.