ಕರ್ನಾಟಕ

karnataka

By

Published : Aug 28, 2020, 11:37 PM IST

ETV Bharat / state

ಬಾಕಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಇ-ಲೋಕ್ ಅದಾಲತ್: ನ್ಯಾ. ಮುರಳೀಧರ ಪೈ

ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಅತೀ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವಂತೆ ರಾಜ್ಯದ ನ್ಯಾಯಾಲಯದ ಆವರಣಗಳಲ್ಲಿ ಇ-ಲೋಕ್​ ಅದಾಲತ್ ಅನ್ನು ಆರಂಭಿಸಲಾಗಿದೆ.

e loka adalath in courts
ನ್ಯಾ. ಮುರಳೀಧರ ಪೈ

ಮಂಗಳೂರು: ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ರಾಜ್ಯದ ನ್ಯಾಯಾಲಯದ ಆವರಣಗಳಲ್ಲಿ ಇ-ಲೋಕ್ ಅದಾಲತ್ ಅನ್ನು ಆರಂಭಿಸಲಾಗಿದೆ.

ಈ ಮೂಲಕ ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಅತೀ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈ ಹೇಳಿದರು.

ನ್ಯಾಯಾಲಯ ಸಂಕೀರ್ಣ ಆವರಣದಲ್ಲಿ‌ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ವಕೀಲರು ವಿಡಿಯೋ ಕಾನ್ಫರೆನ್ಸ್ ಅಥವಾ ಕೋರ್ಟ್​ಗಳಿಗೇ ಆಗಮಿಸಿ ಕೇಸ್ ನಡೆಸುತ್ತಿದ್ದಾರೆ. ಆದರೆ ಯಾವುದೇ ಕೇಸ್​ಗಳ ತೀರ್ಮಾನದ ಸಂದರ್ಭದಲ್ಲಿ ಕಕ್ಷಿದಾರರ ಅಗತ್ಯ ಕಂಡು ಬಂದಲ್ಲಿ ಅಥವಾ ರಾಜಿ ಸಂಧಾನದ ಸಂದರ್ಭ ಬಂದಲ್ಲಿ ನಾವು ಅವರ ಉಪಸ್ಥಿತಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಲಾಗುತ್ತದೆ. ಈ ಮೂಲಕ ಸಾರ್ವಜನಿಕರು ತಮ್ಮ ವ್ಯಾಜ್ಯಗಳನ್ನು ಇ-ಲೋಕ್​ ಅದಾಲತ್ ಮೂಲಕ ಸುಲಭವಾಗಿ ಬಗೆಹರಿಸಬಹುದು. ಇ-ಲೋಕ್​ ಅದಾಲತ್ ಮೂಲಕ ಕೇಸ್ ಬಗೆ ಹರಿಸಬೇಕೆಂದು ಅಭಿಲಾಷೆ ಉಳ್ಳವರು ಜಿಲ್ಲಾ ಸತ್ರ ನ್ಯಾಯಾಲಯ ತಾಲೂಕು ನ್ಯಾಯಾಲಯ ಅಥವಾ ವಕೀಲರನ್ನು ಸಂಪರ್ಕಿಸಿದಲ್ಲಿ, ನಾವು ಉಭಯ ಪಕ್ಷದವರ ಒಪ್ಪಿಗೆಯ ಮೇರೆಗೆ ವ್ಯಾಜ್ಯ ತೀರ್ಮಾನ ಮಾಡುತ್ತೇವೆ ಎಂದು ನ್ಯಾಯಾಧೀಶ ಮುರಳೀಧರ ಪೈ ಹೇಳಿದರು.

ದ.ಕ. ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಸುಮಾರು 52 ಸಾವಿರದಷ್ಟು ಪ್ರಕರಣಗಳು ಬಾಕಿ ಉಳಿದಿದ್ದು, ಅದರಲ್ಲಿ ಎಲ್ಲಾ ಪ್ರಕರಣಗಳನ್ನು ಇ-ಲೋಕ್​ ಅದಾಲತ್ ಮೂಲಕ ಇತ್ಯರ್ಥ ಮಾಡಲು ಸಾಧ್ಯವಿಲ್ಲ. ಚೆಕ್ ಅಮಾನ್ಯ ಪ್ರಕರಣ, ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣದ ಪ್ರಕರಣ, ರಾಜಿಯಾಗಬಲ್ಲ ಪ್ರಕರಣಗಳು ಸೇರಿ 15 ಸಾವಿರ ಪ್ರಕರಣಗಳನ್ನು ಪರಿಹಾರ ಮಾಡಲು ಸಾಧ್ಯ. ಅವುಗಳಲ್ಲಿಯೂ ಸಮನ್ಸ್ ಜಾರಿಯಾಗಿರುವುದು, ನೊಟೀಸ್​​ ಜಾರಿಯಾಗಿರುವ ಪ್ರಕರಣಗಳನ್ನು ತೆಗೆದುಕೊಳ್ಳಲಾಗುವುದಿಲ್ಲ.‌ ಸಮನ್ಸ್ ಜಾರಿಯಾಗಿ ಅವರೇ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದರೆ ಅಥವಾ ವಕೀಲರ ಮೂಲಕ ಹಾಜರುಪಡಿಸಿದ್ದರೆ ಅಂತಹ ಪ್ರಕರಣಗಳನ್ನು ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ ಎರಡೂ ಪಕ್ಷಗಳ ಅಗತ್ಯ ಕಕ್ಷಿದಾರರು ಹಾಜರಾಗಿದ್ದಲ್ಲಿ ಮಾತ್ರ ನಾವು ಇ-ಲೋಕ್ ಅದಾಲತ್​ನಲ್ಲಿ ಪ್ರಕರಣಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈಗಾಗಲೇ 1000 ಪ್ರಕರಣಗಳು ಇ-ಲೋಕ್​ ಅದಾಲತ್​ನಲ್ಲಿ ತೆಗೆದುಕೊಳ್ಳಲಾಗಿದೆ. ಮುಂದಿನ ಸೆ.19 ರೊಳಗೆ 2000 ಪ್ರಕರಣಗಳನ್ನು ಇ-ಲೋಕ್​ ಅದಾಲತ್ ನಲ್ಲಿ ಪಡೆದುಕೊಳ್ಳಲಾಗುತ್ತದೆ. ಇದರಲ್ಲಿ ಎರಡೂ ಪಕ್ಷದವರು ಒಪ್ಪಿದ್ದಲ್ಲಿ ಮಾತ್ರ ನಾವು ವ್ಯಾಜ್ಯ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಎಂದು ನ್ಯಾಯಾಧೀಶ ಮುರಳೀಧರ ಪೈಯವರು ಹೇಳಿದರು.

ಇದಕ್ಕಿಂತ ಮೊದಲು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡಿದರು.

ABOUT THE AUTHOR

...view details