ಮಂಗಳೂರು: ಅಂತಾರಾಜ್ಯಗಳಲ್ಲಿ ಕಳವು ಮಾಡುತ್ತಿದ್ದ ಕಳ್ಳರನ್ನು ಬಂಧಿಸಿರುವ ಮಂಗಳೂರಿನ ದಕ್ಷಿಣ ಠಾಣಾ ಪೊಲೀಸರು 4,40,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಚೌಕಿಗ್ರಾಮ, ಕೆಸರೆ ಪೋಸ್ಟ್, ಕೊಪ್ಪ ನಿವಾಸಿ ಅನಿಲ್ ಕುಮಾರ್(28), ಮಂಗಳೂರಿನ ಧರ್ಮಮನೆ ಬೋಳಿಯಾರ್ ಗ್ರಾಮದ ನಿವಾಸಿ ವೀರೇಂದ್ರ ಶೆಟ್ಟಿ(46), ಮಂಗಳೂರಿನ ಬೆಂಗರೆ ಕಸಬಾ ನಿವಾಸಿ ಅಬ್ದುಲ್ ರಹೀಂ ಆಲಿಯಾಸ್ ಚಪ್ಪೆ ತಣ್ಣಿ ರಹೀಂ(42) ಬಂಧಿತ ಆರೋಪಿಗಳು.
ಆರೋಪಿಗಳಿಂದ ಕೇರಳದ ರಾಜ್ಯದ ಕೊಯಿಲಾಂಡಿಯಲ್ಲಿರುವ ಮನೆಯಿಂದ ಕಳವು ಮಾಡಿದ ಸುಮಾರು 136 ಗ್ರಾಂ ತೂಕದ ಚಿನ್ನಾಭರಣ, ಕೊಯಿಲಾಂಡಿಯ ಇನ್ನೊಂದು ಮನೆಯಿಂದ ಕಳವು ಮಾಡಿದ ಸೋನಿ ಕಂಪೆನಿಯ ಟಿವಿ ಮತ್ತು ಮಂಗಳೂರಿನ ಕುಲಶೇಖರದಲ್ಲಿರುವ ಮನೆಯಿಂದ ಕಳವು ಮಾಡಿದ ಒನಿಡಾ ಕಂಪೆನಿಯ ಟಿವಿ ಮತ್ತು ತಾಮ್ರದ ಅಂಡೆ ವಶಪಡಿಸಿಕೊಂಡಿದ್ದಾರೆ.
ಸೊತ್ತುಗಳ ಒಟ್ಟು ಮೌಲ್ಯ ಸುಮಾರು 4,40,000 ರೂ.ಎಂದು ಅಂದಾಜಿಸಲಾಗಿದೆ. ಆರೋಪಿಗಳ ಪೈಕಿ ಅನಿಲ್ ಕುಮಾರ್ ಎಂಬಾತನ ಮೇಲೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ 3 ಕಳ್ಳತನ ಪ್ರಕರಣ, ಉಡುಪಿ ನಗರ ಠಾಣೆಯಲ್ಲಿ 2 ಕಳ್ಳತನ ಪ್ರಕರಣ, ಕ್ಯಾಲಿಕಟ್ ಮೆಡಿಕಲ್ ಕಾಲೇಜು ಪೊಲೀಸ್ ಠಾಣೆಯಲ್ಲಿ 3 ಕಳ್ಳತನ ಪ್ರಕರಣ, ಕ್ಯಾಲಿಕಟ್ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.
ಮತ್ತೋರ್ವ ಆರೋಪಿ ವಿರೇಂದ್ರಶೆಟ್ಟಿ ಎಂಬಾತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 1 ದರೋಡೆ ಪ್ರಕರಣ, ಬಂಟ್ವಾಳ ಪೊಲೀಸ್ ಠಾಣೆಯಲ್ಲಿ 1 ದರೋಡೆ ಪ್ರಕರಣ, ಕೊಣಾಜೆ ಪೊಲೀಸ್ ಠಾಣೆಯಲ್ಲಿ 1 ಕೊಲೆಯತ್ನ ಪ್ರಕರಣ, ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 1 ದರೋಡೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿ ಅಬ್ದುಲ್ ರಹೀಂ ಆಲಿಯಾಸ್ ಚಪ್ಪೆ ತಣ್ಣಿ ರಹೀಂ, ಎಂಬಾತನ ಮೇಲೆ ಉತ್ತರ ಪೊಲೀಸ್ ಠಾಣೆಯಲ್ಲಿ 2 ಕೊಲೆಯತ್ನ ಪ್ರಕರಣ , ಬರ್ಕೆ ಪೊಲೀಸ್ ಠಾಣೆ, ಪಣಂಬೂರು ಪೊಲೀಸ್ ಠಾಣೆ, ಕರಾವಳಿ ಕಾವಲುಪಡೆ ಪೊಲೀಸ್ ಠಾಣೆ, ಮಂಗಳೂರು ಪೂರ್ವ ಪೊಲೀಸ್ ಠಾಣೆ ತಲಾ ಒಂದೊಂದು ಗಾಂಜಾ ಪ್ರಕರಣ ದಾಖಲಾಗಿರುತ್ತದೆ, ಈತನ ಮೇಲೆ 2017ನೇ ಸಾಲಿನಲ್ಲಿ ಗೂಂಡಾಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಲ್ಲಿ ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಹನುಮಂತರಾಯ, ಉಪ ಪೊಲೀಸ್ ಆಯುಕ್ತೆ (ಅಪರಾಧ ಮತ್ತು ಸಂಚಾರ) ಉಮಾಪ್ರಶಾಂತ್, ಮಂಗಳೂರು ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸುಧೀರ್ ಹೆಗ್ಡೆರವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕುಮಾರ್ ಆರಾಧ್ಯ ನಿರ್ದೇಶನದಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪನಿರೀಕ್ಷಕರಾದ ಮಂಜುಳಾ.ಎಲ್ ರವರು ಠಾಣಾ ಸಿಬ್ಬಂದಿಯ ಸಹಕಾರದಿಂದ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.