ಬಂಟ್ವಾಳ : ಎರಡು ದಿನಗಳ ಹಿಂದೆ ತಾಲೂಕಿನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಹೊಂದಿದ್ದ ವ್ಯಕ್ತಿಯ ಬಂಧನವಾಗಿತ್ತು. ಇವುಗಳ ಪೈಕಿ ಬೃಹತ್ ಪ್ರಮಾಣದ ಗಾಂಜಾವನ್ನು ದಾಸ್ತಾನಿಟ್ಟುಕೊಂಡಿದ್ದ ವ್ಯಕ್ತಿಗೆ ವಿಶಾಖಪಟ್ಟಣ ಸಹಿತ ಹೊರರಾಜ್ಯಗಳ ಲಿಂಕ್ ಇರುವುದು ಇದೀಗ ತನಿಖೆಯಿಂದ ಗೊತ್ತಾಗಿದೆ.
ಕಳೆದೆರಡು ದಿನಗಳ ಹಿಂದೆ ವಿಟ್ಲದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಪೆಡ್ಲರ್ ಬಳಿ ಗಾಂಜಾ ಪತ್ತೆಯಾಗಿತ್ತು. ಈತ ಬಿ.ಸಿ.ರೋಡ್ ಬಿ.ಮೂಡ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಅದೇ ದಿನ ದಾಳಿ ನಡೆಸಿದ ನಗರ ಠಾಣಾ ಪೊಲೀಸರು ಆರೋಪಿ ಅಹಮದ್ ಸಾಬಿತ್ (30) ಎಂಬಾತನಿಂದ ಸುಮಾರು 19.5 ಲಕ್ಷ ರೂ. ಮೌಲ್ಯದ 40 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದರು. ದಾಳಿ ವೇಳೆ ಓರ್ವ ತಪ್ಪಿಸಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಇನ್ನು ಆರೋಪಿ ಸಾಬಿತ್ನನ್ನು ವಿಚಾರಣೆ ಮಾಡಿದಾಗ ಜಿಲ್ಲೆಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಬೃಹತ್ ಜಾಲದ ಬಗ್ಗೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.