ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಾಳೆಯಿಂದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಜಾಂಬೂರಿಯ ಸಿದ್ಧತೆ ಅಂತಿಮ ಹಂತಕ್ಕೆ ತಲುಪಿದೆ.
ಸ್ಕೌಟ್ಸ್ ಮತ್ತು ಗೈಡ್ಸ್ನ ಅಂತರಾಷ್ಟ್ರೀಯ ಸಮ್ಮೇಳನವಾಗಿರುವ ಸಾಂಸ್ಕೃತಿಕ ಜಾಂಬೂರಿ ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ. ಈ
ಸಾಂಸ್ಕೃತಿಕ ಜಾಂಬೂರಿಗೆ ಸಾವಿರಕ್ಕೂ ಅಧಿಕ ಕಲಾವಿದರು, ಕಾರ್ಮಿಕರು ಅಂತಿಮ ಸ್ಪರ್ಶ ನೀಡುತ್ತಿದ್ದು, ಆಳ್ವಾಸ್‌ನ ವಿದ್ಯಾಗಿರಿಯನ್ನು ಶೃಂಗಾರಗೊಳಿಸಲಾಗಿದೆ. ಸುಮಾರು 150 ಎಕರೆ ವಿಶಾಲ ಪ್ರದೇಶದಲ್ಲಿ ಜಾಂಬೂರಿ ಉತ್ಸವ ನಡೆಯುತ್ತಿದೆ.
ಈ ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದ ಆಗಮಿಸುವ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬೌದ್ಧಿಕ ವಿಕಾಸದೊಂದಿಗೆ ಮನೋ ವಿಕಾಸಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಏಕಕಾಲದಲ್ಲಿ ಧ್ಯಾನ ಮತ್ತು ಯೋಗಾಸನ ಮಾಡುವ ಮೂಲಕ ವಿಶಿಷ್ಟ ದಾಖಲೆಯನ್ನು ಕಾರ್ಯಕ್ರಮದಲ್ಲಿ ಮಾಡಲಿದ್ದಾರೆ. 50 ಸಾವಿರ ಆಸನ ವ್ಯವಸ್ಥೆಯ ಇರುವ ಬಯಲು ರಂಗಮಂಟಪವನ್ನು ಸುಣ್ಣ ಬಣ್ಣಗಳಿಂದ ಶೃಂಗರಿಸುವ ಕಾರ್ಯಕ್ಕೆ ಅಂತಿಮ ರೂಪ ನೀಡಲಾಗುತ್ತಿದೆ.
ವಿದ್ಯಾಗಿರಿಯಲ್ಲಿರುವ ಆಳ್ವಾಸ್‌ನ ಎಲ್ಲ ಶೈಕ್ಷಣಿಕ ಕಟ್ಟಡಗಳು, ವಿದ್ಯಾರ್ಥಿಗಳ ನಿಲಯಗಳಿಗೂ ಸುಣ್ಣ ಬಣ್ಣಗಳನ್ನು ಬಳಿಯಲಾಗಿದೆ. ಪಿರಮಿಡ್‌ಗಳು, ಗೂಡುದೀಪಗಳ ಸಂಯೋಜನೆಯೊಂದಿಗೆ ಮಂದ ಬೆಳಕಿನ ಸೊಬಗು ಕಣ್ಮನ ಸೆಳೆಯುತ್ತಿದೆ. ಸ್ಕೌಟ್ಸ್ ಗೈಡ್ಸ್ - ವಿದ್ಯಾರ್ಥಿಗಳ ಚಟುವಟಿಕೆಯ ಪ್ರಮುಖ ಭಾಗವಾಗಿ ವಿವೇಕಾನಂದ ನಗರದಲ್ಲಿ ಸುಮಾರು 12 ಎಕರೆ ಪ್ರದೇಶದಲ್ಲಿ ಹಲವು ರೀತಿಯ ಕಸರತ್ತುಗಳಿಗೆ ಪೂರಕವಾದ ವ್ಯವಸ್ಥೆಯನ್ನು ತಜ್ಞರ ತಂಡ ಸಿದ್ಧಗೊಳಿಸಿದೆ.
12 ಎಕರೆ ಪ್ರದೇಶದಲ್ಲಿ ಬೆಳೆಸಿದ ಕೃಷಿ ಲೋಕ ಕಣ್ಮನ ಸೆಳೆಯುತ್ತಿದೆ. ರಾಜ್ಯ ಹೊರ ರಾಜ್ಯದಿಂದ ತರಿಸಿದ ಬಣ್ಣಬಣ್ಣದ ಹೂವುಗಳ ಅಂದ ಚಂದ ನೋಡುಗರನ್ನು ಸೆಳೆಯುತ್ತಿದೆ. ವೈವಿಧ್ಯಮಯ ಪ್ರದರ್ಶನಗಳ ಅಪೂರ್ವ ಸಂಗಮ – ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಡಿ. 21ರಿಂದ 27ರವರೆಗೆ ಪೂರ್ವಾಹ್ನ 9.30ರಿಂದ ರಾತ್ರಿ 9.00ರವರೆಗೆ ನಡೆಯಲಿದೆ.
ಜನಮನ ತಣಿಸುವ ಅಪೂರ್ವ ಕಾರ್ಯಕ್ರಮಗಳೊಂದಿಗೆ 5 ಬೃಹತ್ ಮೇಳಗಳನ್ನು ಆಯೋಜಿಸಲಾಗಿದೆ. ಕೃಷಿಮೇಳದಲ್ಲಿ ಎ.ಜಿ.ಕೊಡ್ಡಿ ಆವರಣದಲ್ಲಿ 12 ಎಕರೆ ವಿಸ್ತಾರದ ಪಾರಂಪರಿಕ ತರಕಾರಿ ತೋಟವನ್ನ ಸಿದ್ಧಗೊಳಿಸಲಾಗಿದೆ. 100 ವಿವಿಧ ತರಕಾರಿಗಳ ಅತ್ಯಾಕರ್ಷಕ ನೈಜ ತೋಟ. ದೇಶ-ವಿದೇಶಗಳ ಬಾಳೆ, ತೆಂಗು, ಧಾನ್ಯ, 530 ವಿವಿಧ ತಳಿಯ ಭತ್ತ, ಗೆಡ್ಡೆ ಗೆಣಸುಗಳು, ವಿಶಾಲ ನೈಜ ಪುಷ್ಪಾಲಂಕಾರದಿಂದ ಸುತ್ತುವರಿದ ಕೃಷಿ ಸಿರಿ ಆವರಣ ಇರಲಿದೆ.
ವಿಜ್ಞಾನಮೇಳದಲ್ಲಿ ಪ್ರಾಥಮಿಕದಿಂದ ಸ್ನಾತಕೋತ್ತರದವರೆಗಿನ ವಿದ್ಯಾರ್ಥಿಗಳು ಅಗತ್ಯವಾಗಿ ನೋಡಲೇ ಬೇಕಾದ ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ, ವೈಜ್ಞಾನಿಕ ಆಟಿಕೆಗಳ ಪ್ರದರ್ಶನ ಮತ್ತು ಮಾರಾಟ, ಮತ್ಸ್ಯ ಪ್ರದರ್ಶನ, ಏರೋಪ್ಲೇನ್ ಎಕ್ಸಿಬಿಶನ್ ಇರಲಿದೆ.
ಪುಸ್ತಕಮೇಳದಲ್ಲಿ ಪ್ರಾದೇಶಿಕ, ಪ್ರಾಂತೀಯ, ದೇಶೀಯ ಮತ್ತು ಅಂತಾರಾಷ್ಟ್ರೀಯ ಭಾಷೆಗಳ ಅಸಂಖ್ಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವೂ ಇರಲಿದೆ. ಇದರಲ್ಲಿ ವಿವಿಧ ಅಕಾಡೆಮಿಗಳು, ವಿಶ್ವವಿದ್ಯಾನಿಲಯದ ಪ್ರಸಾರಾಂಗಗಳು ಭಾಗಿಯಾಗಲಿವೆ.
ಕಲಾಮೇಳದಲ್ಲಿ ದೇಶ-ವಿದೇಶಗಳ ಪ್ರತಿಭಾನ್ವಿತ ಕಲಾವಿದರ ಸಂಗಮದ ಚಿತ್ರಕಲೆ, ಶಿಲ್ಪಕಲೆ, ವ್ಯಂಗ್ಯ ಚಿತ್ರ ಹಾಗೂ ಫೋಟೋಗ್ರಫಿ ರಚನೆ ಮತ್ತು ಪ್ರದರ್ಶನ ನಡೆಯಲಿದೆ. ಆಹಾರ ಮೇಳದಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ವೈವಿಧ್ಯಮಯ ಸಸ್ಯಹಾರಿ ಮತ್ತು ಮಾಂಸಾಹಾರಿ ಆಹಾರಗಳು, ಹಣ್ಣುಹಂಪಲುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ಪ್ರತಿನಿತ್ಯ 5 ವೇದಿಕೆಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಆಳ್ವಾಸ್ ನುಡಿಸಿರಿ ವೇದಿಕೆ, ಡಾ.ವಿ.ಎಸ್.ಆಚಾರ್ಯ ವೇದಿಕೆ, ಕೃಷಿಸಿರಿ ವೇದಿಕೆಗಳಲ್ಲಿ ಪೂರ್ವಾಹ್ನ 10.00 ರಿಂದ ಸಂಜೆ 6.00ರವರೆಗೆ ಕಾರ್ಯಕ್ರಮಗಳು ನಡೆಯಲಿದ್ದು, ಕೆ.ವಿ.ಸುಬ್ಬಣ್ಣ ವೇದಿಕೆಯಲ್ಲಿ ಸಂಜೆ 5.30ರಿಂದ ರಾತ್ರಿ 9.00ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಸ್ಕೌಟ್ಸ್-ಗೈಡ್ಸ್ ಪ್ರತಿನಿಧಿಗಳಿಗೆ ಮಾತ್ರವೇ ಕಾರ್ಯಕ್ರಮ ನೇರವಾಗಿ ನೋಡಲು ಅವಕಾಶ ಇರಲಿದೆ.
ಕಾರ್ಯಕ್ರಮಕ್ಕೆ ವಿದೇಶಿ ಪ್ರತಿನಿಧಿಗಳು ಆಗಮಿಸಲಿದ್ದು, ಮಲೇಶಿಯಾದಿಂದ 24, ದಕ್ಷಿಣ ಕೊರಿಯಾದಿಂದ 7 ಪ್ರತಿನಿಧಿಗಳು ಆಗಮಿಸಲಿದ್ದಾರೆ. 800 ಜಾಂಬೂರಿ ಆ್ಯಕ್ಟಿವಿಟಿ ಲೀಡರ‍್ಸ್, 1000 ಸ್ವಯಂಸೇವಕರು ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ತಮಿಳುನಾಡು ರಾಜ್ಯಗಳಿಂದ ಹಾಗೂ ದಕ್ಷಿಣ ರೈಲ್ವೆ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಸೋಮವಾರದಂದು ಹೊರೆಕಾಣಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಮೂಲ್ಕಿ, ಕಿನ್ನಿಗೋಳಿ, ಬಜ್ಪೆ, ಬಂಟ್ವಾಳ, ಬಿ.ಸಿ ರೋಡ್, ಉಳ್ಳಾಲ, ಬೆಳ್ತಂಗಡಿ, ಉಡುಪಿ ಹಾಗೂ ಮಂಡ್ಯ ಭಾಗಗಳಿಂದ ಅಕ್ಕಿ, ತೆಂಗಿನಕಾಯಿ, ತರಕಾರಿಗಳು, ಸಕ್ಕರೆ, ಬೆಲ್ಲ ಸೇರಿದಂತೆ ಅಗತ್ಯ ವಸ್ತುಗಳ ಬೃಹತ್ ಹೊರೆಕಾಣಿಕೆ ನಡೆಯಿತು. ಮೂಡುಬಿದಿರೆ ವಲಯದ ಮುಸ್ಲಿಂ ಸೌಹಾರ್ದ ಸಮಿತಿಯ ವತಿಯಿಂದ 20 ವಾಹನಗಳಲ್ಲಿ 5 ಲಕ್ಷ ರೂ ಬೆಲೆಯ ಹೊರೆಕಾಣಿಕೆ ಆಗಮನವಾಗಿದೆ. ಸಮಿತಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಕಾರ್ಯದರ್ಶಿ ಶಫಿ ಸೇರಿದಂತೆ 1000 ಜನರು ಭಾಗಿಯಾಗಿದ್ದರು.
ಜಾಂಬೂರಿಯ ಇನ್ನಿತರ ಆಕರ್ಷಣೆಗಳು:35 ಸಾಹಸಮಯ ಕ್ರೀಡೆಗಳು, ಅರಣ್ಯ ಸಂಪತ್ತಿನ ಜಾಗೃತಿ ಮೂಡಿಸಲು ಜಂಗಲ್ ಟ್ರಯಲ್, ಪ್ರತಿ ದಿನ ತಂಡ ತಂಡವಾಗಿ 5 ಕಿಮೀನಷ್ಟು ಸ್ವಚ್ಚತಾ ಕಾರ್ಯ (168ಕಿಮೀ ಸ್ವಚ್ಚಗೊಳಿಸುವ ಗುರಿ), ಕೈಮಗ್ಗ, ಖಾದಿ, ರೇಷ್ಮೆ, ಕರಕುಶಲ ವಸ್ತುಗಳು, ತಿಂಡಿತಿನಿಸುಗಳ ದೇಸಿ ಮಳಿಗೆಗಳು, 1000ಕ್ಕೂ ಮಿಕ್ಕಿದ ವೈವಿಧ್ಯಮಯ ಮತ್ತು ದಿನವಹಿ ಅಗತ್ಯವಸ್ತುಗಳ ಮಾರಾಟ ಮಳಿಗೆಗಳು, ಆಬಾಲ ವೃದ್ಧರಾಗಿ ಎಲ್ಲರಿಗೂ ಅಗತ್ಯದ ಮತ್ತು ಅನುಕೂಲದ ಆಕರ್ಷಕ ಸಾಂಸ್ಕೃತಿಕ ಜಾಂಬೂರಿ. ಮಧ್ಯಾಹ್ನ ಮತ್ತು ರಾತ್ರಿಯ ಉಚಿತ ಊಟೋಪಚಾರದ ಆತಿಥ್ಯ. ಶುಲ್ಕರಹಿತವಾಗಿ ಎಲ್ಲರಿಗೂ ಉಚಿತ ಮತ್ತು ಮುಕ್ತ ಪ್ರವೇಶ ಇರಲಿದೆ.
ಇದನ್ನೂ ಓದಿ:ಬೀದರ್ - ಬೆಂಗಳೂರು ಹೆಚ್ಚುವರಿ ವಿಮಾನ ಸಂಚಾರಕ್ಕೆ ಗ್ರೀನ್ ಸಿಗ್ನಲ್