ಸುಳ್ಯ: ತಾಲೂಕಿನ ಗುತ್ತಿಗಾರಿನ, ಕಮಿಲ-ಮೊಗ್ರ ಸೇತುವೆ ರಚನೆಗೆ ಒತ್ತಾಯಿಸಿ ನಾಗರಿಕರು ಹಂತ ಹಂತದ ಹೋರಾಟ ಆರಂಭಿಸಿದ್ದಾರೆ. ಈ ನಡುವೆ ದೀಪಾವಳಿ ಸಂದರ್ಭ ಮೊಗ್ರ ಹೊಳೆಯಲ್ಲಿ ನಾಗರಿಕರು ಹಣತೆ ಬೆಳಗುವ ಮೂಲಕ ವಿನೂತನ ಮಾದರಿಯಲ್ಲಿ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿದರು.
ಮೊಗ್ರ-ಏರಣಗುಡ್ಡೆ ಸೇತುವೆ ನಿರ್ಮಾಣ ಹಾಗೂ ಗುತ್ತಿಗಾರು-ಕಮಿಲ-ಬಳ್ಪ ರಸ್ತೆ ಸಂಪೂರ್ಣ ಡಾಂಬರೀಕರಣಕ್ಕೆ ಒತ್ತಾಯಿಸಿ ನಾಗರಿಕ ಹೋರಾಟ ಸಮಿತಿಯಿಂದ ಹಕ್ಕೊತ್ತಾಯ ಆರಂಭವಾಗಿದೆ. ಈಗಾಗಲೇ ಹಂತ ಹಂತವಾಗಿ ನಾಗರಿಕರು ಹಕ್ಕೊತ್ತಾಯ ನಡೆಸಿದ್ದಾರೆ. ಇದೀಗ ದೀಪಾವಳಿ ಸಂದರ್ಭ ನಾಗರಿಕ ಹೋರಾಟ ಕ್ರಿಯಾ ಸಮಿತಿಯಿಂದ ಮೊಗ್ರ ಹೊಳೆಯ ಬಳಿ ಹಾಗೂ ಕಾಲು ಸಂಕದ ಬಳಿ ಹಣತೆಯನ್ನು ಹಚ್ಚುವ ಮೂಲಕ ನಾಗರಿಕರು ವಿನೂತನ ಮಾದರಿಯಲ್ಲಿ ಸೇತುವೆ ನಿರ್ಮಾಣಕ್ಕೆ ಹಕ್ಕೊತ್ತಾಯ ಮಾಡಿದ್ದಾರೆ.