ಮಂಗಳೂರು (ದಕ್ಷಿಣ ಕನ್ನಡ):ದುಬೈನಿಂದ ಭಾರತೀಯರನ್ನು ಮಂಗಳೂರಿಗೆ ಕರೆ ತರಲು ಮೊದಲ ವಿಮಾನ ಸಜ್ಜಾಗಿದ್ದು, ನಾಳೆ ರಾತ್ರಿ ಸುಮಾರು 10 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದೆ. ಇದಕ್ಕಾಗಿ ಜಿಲ್ಲಾಡಳಿತವು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದು ಐಎಎಸ್ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆ ಮಂಗಳಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದುಬೈನಿಂದ ಮಂಗಳೂರಿಗೆ ವಿಮಾನದಲ್ಲಿ ಒಟ್ಟು 177 ಪ್ರಯಾಣಿಕರು ಆಗಮಿಸಲಿದ್ದು, ಇವರನ್ನು ಕ್ವಾರಂಟೈನ್ ಮಾಡಲು ಒಟ್ಟು 17 ಹೋಟೆಲ್‍ಗಳು ಹಾಗೂ 12 ಹಾಸ್ಟೆಲ್ಗಳ ವ್ಯವಸ್ಥೆ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿ ನೇಮಿಸಿರುವ ಅಧಿಕಾರಿಯು ಪ್ರಯಾಣಿಕರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಪಡೆಯಲಿದ್ದಾರೆ.
ಪ್ರಯಾಣಿಕರನ್ನು ಸ್ವೀಕರಿಸುವಲ್ಲಿ, ಹೋಟೆಲ್ ಬುಕ್ಕಿಂಗ್ ವ್ಯವಸ್ಥೆ, ವಾಹನ ವ್ಯವಸ್ಥೆ, ಹೋಟೆಲ್ ಕ್ವಾರಂಟೈನ್ ವ್ಯವಸ್ಥೆ ಪ್ರತಿಯೊಂದು ವಿಭಾಗಕ್ಕೂ ಒಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಅಧಿಕಾರಿಗಳು ಎಲ್ಲಾ ಕಡೆ ಭೇಟಿ ನೀಡಿ ಮಾಹಿತಿ ನೀಡಬೇಕು ಎಂದು ರಾಹುಲ್ ಸೂಚಿಸಿದರು.
ಪ್ರಯಾಣಿಕರಲ್ಲಿ ಎ ಮತ್ತು ಬಿ ಎಂಬ 2 ವಿಭಾಗ ಮಾಡಿ, ಕೆಮ್ಮು, ಜ್ವರ, ನೆಗಡಿ ಇರುವವರನ್ನು ಎ ವಿಭಾಗದಲ್ಲಿ ಇರಿಸಲಾಗುವುದು. ಇವರಿಗೆ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ 14 ದಿನಗಳವರೆಗೆ ಕ್ವಾರಂಟೈನ್ ಮಾಡಿ ಬೇಕಾಗುವ ಅಗತ್ಯ ಚಿಕಿತ್ಸೆ ನೀಡಲಾಗುವುದು. ಅದೇ ರೀತಿ ಬಿ ವಿಭಾಗದ ಯಾವುದೇ ರೋಗ ಲಕ್ಷಣ ಇಲ್ಲದವರನ್ನು ಹೋಟೆಲ್ ಅಥವಾ ಹಾಸ್ಟೆಲ್ ಕ್ವಾರೆಂಟೈನ್‍ನಲ್ಲಿ ಇರಿಸಲಾಗುವುದು. ವಿಮಾನ ನಿಲ್ದಾಣದಲ್ಲೇ ಹೋಟೆಲ್‍ಗಳನ್ನು ಗುರುತಿಸಲು ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಪ್ರಯಾಣಿಕರು ಗುರುತಿಸಿರುವ ಹೋಟೆಲ್‍ಗಳಿಗೆ ತಲುಪಿಸಲು ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಾಯರಿ, ಮಂಗಳೂರು ಮಹಾನಗರ ಪಾಲಿಕೆ ಪರಿಸರ ಅಭಿಯಂತರ ಮಧು ಮನೋಹರ್ ಇತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.