ಮಂಗಳೂರು:ಭಾರತದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನೌಕಾಪಡೆ ತುಕಡಿ ಮುನ್ನಡೆಸಿ ನಾಡಿಗೆ ಹೆಮ್ಮೆ ತಂದ ಲೆಫ್ಟಿನೆಂಟ್ ಕಮಾಂಡರ್ ಮಂಗಳೂರಿನ ದಿಶಾ ಅಮೃತ್ ಅವರು ಈ ಬಾರಿ ಫ್ರಾನ್ಸ್ ದೇಶದ ಪ್ಯಾರಿಸ್‌ನ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಜುಲೈ 14ರಂದು ಬಾಸ್ಟಿಲ್ಸ್ ಡೇ ಪರೇಡ್ (ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆ) ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವರು. ಭಾರತದ ನೌಕಾ ದಳ, ಭೂ ದಳ, ವಾಯು ದಳ ಸೇರಿದಂತೆ ಮೂರು ತುಕಡಿಗಳೂ ಪಾಲ್ಗೊಳ್ಳಲಿರುವುದು ವಿಶೇಷ.
ಜು.14ರಂದು ನಡೆಯಲಿರುವ ಬ್ಯಾಸ್ಟಿಲ್ ಪರೇಡ್‌ನಲ್ಲಿ ಭಾಗವಹಿಸಲು ಈಗಾಗಲೇ ನೌಕಾಪಡೆಯ ನಾಲ್ಕು ಮಂದಿ ಅಧಿಕಾರಿಗಳು ಹಾಗೂ 64 ನಾವಿಕರ ತಂಡ ಪ್ಯಾರಿಸ್ ತಲುಪಿದೆ. ಈ ನಾಲ್ವರು ಅಧಿಕಾರಿಗಳ ಪೈಕಿ ದಿಶಾ ಅಮೃತ್ ಕೂಡ ಒಬ್ಬರು. ನೌಕಾ ತುಕಡಿಯನ್ನು ಕಮಾಂಡರ್ ವ್ರತ್ ಬಘೇಲ್ ಮುನ್ನಡೆಸಲಿದ್ದು, ಲೆ. ಕಮಾಂಡರ್ ದಿಶಾ ಅಮೃತ್ ಹಾಗೂ ಲೆಫ್ಟಿನೆಂಟ್ ಕಮಾಂಡರ್ ರಜತ್ ತ್ರಿಪಾಠಿ, ಲೆಫ್ಟಿನೆಂಟ್ ಕಮಾಂಡರ್ ಜಿತಿನ್ ಲಲಿತಾ ಧರ್ಮರಾಜ್ ತುಕಡಿ ಪ್ರತಿನಿಧಿಸಲಿದ್ದಾರೆ. ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆ ಮಾತ್ರವಲ್ಲದೇ, ಅದೇ ದಿನ ಇಂಡೋ-ಫ್ರಾನ್ಸ್ ಕಾರ್ಯತಂತ್ರ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವವೂ ನಡೆಯುತ್ತಿರುವುದು ಗಮನಾರ್ಹ.
ದಿಶಾ ಮಂಗಳೂರಿನ ಬೋಳೂರು ತಿಲಕ್ ನಗರದ ಅಮೃತ್ ಕುಮಾರ್ ಮತ್ತು ಲೀಲಾ ಅಮೃತ್ ದಂಪತಿಯ ಪುತ್ರಿ. ಬಾಲ್ಯದಲ್ಲೇ ನೌಕಾಪಡೆ ಅಧಿಕಾರಿಯಾಗಬೇಕೆಂದು ಕನಸು ಕಂಡವರು ದಿಶಾ ಅಮೃತ್. ಮಂಗಳೂರಿನ ಕೆನರಾ, ಅಲೋಶಿಯಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ, ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಕಲಿತು ತನ್ನಿಚ್ಚೆಯಂತೆಯೇ ನೌಕಾಪಡೆ ಸೇರಿದ್ದಾರೆ. 2016ರಲ್ಲಿ ನೌಕಾಪಡೆ ಸೇರಿದ ಇವರು ಪ್ರಸ್ತುತ ಲೆಫ್ಟಿನೆಂಟ್ ಕಮಾಂಡರ್ ಆಗಿದ್ದು, ಪತಿ ರಾಹುಲ್ ಭಾರತೀಯ ಸೇವೆಯಲ್ಲಿ ಜನರಲ್ ಆಗಿದ್ದಾರೆ.