ಬಂಟ್ವಾಳ: ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ, ಎಪಿಎಂಸಿ ಕಾಯ್ದೆ, ಕೈಗಾರಿಕೆ ವ್ಯಾಜ್ಯಗಳು ಮತ್ತು ಇತರೆ ಕಾರ್ಮಿಕ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗಳನ್ನು ಜಾರಿ ಮಾಡದಂತೆ ಒತ್ತಾಯಿಸಿ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಬಂಟ್ವಾಳ ತಾಲೂಕು ಸಮಿತಿಯಿಂದ ಮಿನಿವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ರೈತ, ದಲಿತ, ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆ ಜಾರಿ ಮಾಡದಂತೆ ಒತ್ತಾಯಿಸಿ ಪ್ರತಿಭಟನೆ
ಭಾರತೀಯ ಕಮ್ಯೂನಿಸ್ಟ್ ಪಕ್ಷದ ಬಂಟ್ವಾಳ ತಾಲೂಕು ಸಮಿತಿಯಿಂದ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಸುಗ್ರೀವಾಜ್ಞೆ, ಎಪಿಎಂಸಿ ಕಾಯ್ದೆ ಸುಗ್ರೀವಾಜ್ಞೆ, ಇತರೆ ಕಾರ್ಮಿಕ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗಳನ್ನು ಜಾರಿ ಮಾಡದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಮಾತನಾಡಿ, ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸುಗ್ರೀವಾಜ್ಞೆಗಳು ರಾಜ್ಯದ ರೈತಾಪಿ ಹಾಗೂ ಕಾರ್ಮಿಕ, ಜನ ಸಮೂಹಗಳ ಮೇಲೆ ಅತ್ಯಂತ ಗಂಭೀರ ದುಷ್ಪರಿಣಾಮಗಳನ್ನು ಉಂಟು ಮಾಡುತ್ತದೆ. ಈ ಸುಗ್ರೀವಾಜ್ಞೆ ಆರ್ಥಿಕ ಅಸಮಾನತೆಯನ್ನು ತೀವ್ರಗೊಳಿಸುವುದಲ್ಲದೆ ದಲಿತ, ಅಲ್ಪಸಂಖ್ಯಾತ, ಮಹಿಳೆ ಹಾಗೂ ವಿವಿಧ ಸಾಮಾಜಿಕ ಜನಸಮೂಹಗಳಲ್ಲಿ ಮತ್ತಷ್ಟು ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ ಎಂದು ಆರೋಪಿಸಿದರು.
ಈ ವೇಳೆ ಸಂಘಟನೆಯ ಪ್ರಮುಖರಾದ ಹೆಚ್. ವಿ. ರಾವ್, ಶ್ರೀನಿವಾಸ ಭಂಡಾರಿ, ಪ್ರೇಮನಾಥ ಕೆ, ಭಾರತ್ ಪ್ರಶಾಂತ್, ಆರ್. ಡಿ. ಸೋನ್ಸ್, ಸರಸ್ವತಿ ಕಡೇ ಶಿವಾಲಯ, ರತಿ ಎಸ್., ಬಾಬು ಭಂಡಾರಿ, ದಿನೇಶ್ ಮಂಗಳೂರು, ಹರ್ಷಿತ್, ಕೇಶವತಿ, ಕುಸುಮ, ದೀಪಕ್ ಮಂಗಳೂರು, ಸುಧಾಕರ ಕಲ್ಲೂರು ಉಪಸ್ಥಿತರಿದ್ದರು.