ಮಂಗಳೂರು(ದಕ್ಷಿಣ ಕನ್ನಡ) : ಸುರತ್ಕಲ್ ಎನ್ಐಟಿಕೆಯ ಟೋಲ್ ಗೇಟ್ ತೆರವಿಗಾಗಿ ಆಗ್ರಹಿಸಿ ಅಕ್ಟೋಬರ್ 28 ರಿಂದ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟೋಲ್ ಗೇಟ್ ತೆರವಿಗೆ ಅಕ್ಟೋಬರ್ 18 ರಂದು ನಡೆದ ಹೋರಾಟಕ್ಕೆ ಜನರು ಬೆಂಬಲಿಸಿದ್ದಾರೆ. ಅಂದು ನಾವು ಟೋಲ್ ಗೇಟ್ ಮುತ್ತಿಗೆ ಹಾಕಿ ಕೆಲಹೊತ್ತು ಟೋಲ್ ಗೇಟ್ ಸಂಗ್ರಹವನ್ನು ಸ್ಥಗಿತಗೊಳಿಸಲು ಯಶಸ್ವಿಯಾಗಿದ್ದೇವೆ. ಇದರ ನಡುವೆ ಸಂಸದ ನಳಿನ್ ಕುಮಾರ್ ಕಟೀಲ್ 20 ದಿನಗಳಲ್ಲಿ ತೆರವು ಮಾಡುವ ಭರವಸೆ ನೀಡಿದ್ದಾರೆ. ಆದರೆ ಭರವಸೆ ಮೇಲೆ ನಂಬಿಕೆ ಇಲ್ಲ ಎಂದರು.
ಇದೀಗ ಅವರ ಭರವಸೆಯನ್ನು ನೆನಪಿಸಲು ಅಕ್ಟೋಬರ್ 28 ರಿಂದ ಹಗಲು ರಾತ್ರಿ ಧರಣಿ ನಡೆಸಲಾಗುವುದು. ಅವರು ನೀಡಿದ ಭರವಸೆಯಂತೆ ನವೆಂಬರ್ 7 ಕ್ಕೆ ಟೋಲ್ ಗೇಟ್ ಬಂದ್ ಆಗಬೇಕು. ಅಕ್ಟೋಬರ್ 28 ರಿಂದ ಆರಂಭವಾಗುವ ಹಗಲು ರಾತ್ರಿ ಮುಷ್ಕರವನ್ನು ಟೋಲ್ ಗೇಟ್ ಬಂದ್ ಆಗುವವರೆಗೂ ನಡೆಸಲಾಗುವುದು ಎಂದು ಹೇಳಿದರು.
ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಅಕ್ಟೋಬರ್ 28 ಮುಷ್ಕರ ಜಿಲ್ಲಾಧಿಕಾರಿಗಳು ನಡೆಸಿದ ಸಭೆಯಲ್ಲಿ ಟೋಲ್ ಗೇಟ್ ಬಂದ್ ಮಾಡಲು 15 ದಿವಸಗಳ ಕಾಲಾವಕಾಶ ಕೇಳಿದ್ದರು. ಎಸಿಪಿ ಕಚೇರಿಯಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಭೆಯಲ್ಲಿ 15 ದಿವಸಗಳ ಕಾಲಾವಕಾಶ ಕೇಳಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು 20 ದಿನಗಳ ಕಾಲಾವಕಾಶ ಕೇಳಿದ್ದರು. ಇದೀಗ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ನವೆಂಬರ್ ಅಂತ್ಯ ಎಂದು ಹೇಳುತ್ತಿದ್ದಾರೆ. ಇವರ ಯಾವುದೇ ಹೇಳಿಕೆಯನ್ನು ನಂಬುವ ಸ್ಥಿತಿಯಲ್ಲಿ ನಾವು ಇಲ್ಲ. ಇದಕ್ಕಾಗಿ ಟೋಲ್ ಗೇಟ್ ಬಂದ್ ಮಾಡುವಂತೆ ಒತ್ತಾಯಿಸಿ ಅಕ್ಟೋಬರ್ 28 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದರು.
ಇದನ್ನೂ ಓದಿ :ಸುರತ್ಕಲ್ ಟೋಲ್ ಗೇಟ್ ಪ್ರತಿಭಟನೆ: ಹೋರಾಟಗಾರರ ವಿರುದ್ಧ ಎರಡು ಎಫ್ಐಆರ್