ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ವೇಳೆ ಹೆಚ್ಚಿದ ಮಾದಕ ವಸ್ತುಗಳ ಬೇಡಿಕೆ: ಪೊಲೀಸರ ಕಠಿಣ ಕ್ರಮ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್​ಡೌನ್ ವೇಳೆ ಮಾದಕ ವಸ್ತುಗಳ ಸರಬರಾಜು ಹಾಗೂ ಬೇಡಿಕೆ ಹೆಚ್ಚಿದ್ದು, ಈ ಸಂಬಂಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.

Increased drug supply in locked down period
ಹೆಚ್ಚಿದ ಮಾದಕ ವಸ್ತುಗಳ ಬೇಡಿಕೆ

By

Published : Aug 28, 2020, 10:54 PM IST

ಮಂಗಳೂರು: ಕೊರೊನಾ ಸೋಂಕಿನಿಂದ ದೇಶಾದ್ಯಂತ ಲಾಕ್​ಡೌನ್ ಘೋಷಣೆಯಾದ ಸಮಯದಲ್ಲಿ ಮಾದಕ ವಸ್ತುಗಳಿಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ. ಲಾಕ್​ಡೌನ್​ನಿಂದ ಎಲ್ಲ ಕಡೆ ತೀವ್ರ ಬಂದೋಬಸ್ತ್ ಹೆಚ್ಚಾದ ಹಿನ್ನೆಲೆ ಗಾಂಜಾ, ಡ್ರಗ್ಸ್ ಸಾಗಾಟಕ್ಕೆ ಅಡಚಣೆಯಾಗಿತ್ತು. ಮದ್ಯದಂಗಡಿಗಳು ಮುಚ್ಚಿದ ಪರಿಣಾಮ ಮಾದಕ ದ್ರವ್ಯಗಳಿಗೆ ಮತ್ತು ಅಕ್ರಮ ಮದ್ಯಕ್ಕೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿತ್ತು.

ಹೆಚ್ಚಿದ ಮಾದಕ ವಸ್ತುಗಳ ಬೇಡಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ‌ವಾಗಿ ಸಾಗಾಟವಾಗುತ್ತಿದ್ದ ಗಾಂಜಾ ಮತ್ತು ಇತರ ಮಾದಕ ದ್ರವ್ಯದ ಮೇಲೆ ಪೊಲೀಸರು ಎಷ್ಟೇ ಕಾವಲುಕಾದರೂ ಜಿಲ್ಲೆಯಲ್ಲಿ ವ್ಯಸನಿಗಳ ಕೈಗೆ ಮಾದಕ ದ್ರವ್ಯಗಳು ಸಿಗುತ್ತಿದ್ದವು.

ಅಕ್ರಮ ಮಾದಕ ವಸ್ತುಗಳಿಗೆ ಕಡಿವಾಣ ಹಾಕಲು ಪೊಲೀಸರು ಬೆನ್ನು ಬಿದ್ದಿದ್ದು, 2020ರ ಜನವರಿಯಿಂದ ಇಲ್ಲಿಯವರೆಗೆ 9 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. 2019 ಮತ್ತು 2018 ರಲ್ಲಿ ತಲಾ 17 ಪ್ರಕರಣಗಳು ಪತ್ತೆಯಾಗಿದ್ದವು.

ಆಗಸ್ಟ್ ತಿಂಗಳ 11ರಂದು ಗಾಂಜಾ ಸಾಗಾಟದ ಭಾರಿ ಜಾಲವನ್ನು ಪೊಲೀಸರು ಬಲಗೆ ಕೆಡವಿದ್ದರು. ಸುಮಾರು 17.5 ಲಕ್ಷ ಮೌಲ್ಯದ 175 ಕೆ.ಜಿ. ಗಾಂಜಾವನ್ನು ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಪಾಟ್ರಕೋಡಿ ಎಂಬಲ್ಲಿ ಪುತ್ತೂರು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಸಂಬಂಧ ಮೂವರನ್ನು ಬಂಧಿಸಲಾಗಿತ್ತು.

ಮದ್ಯದಂಗಡಿಗಳು ಮುಚ್ಚಿದ ಪರಿಣಾಮ ಕಳ್ಳ ಭಟ್ಟಿ ಪ್ರಕರಣ ಹೆಚ್ಚಾಗಿದ್ದವು. ಅಬಕಾರಿ ಇಲಾಖೆ ಲಾಕ್​ಡೌನ್ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಂಬಂಧ 468 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 29 ದೊಡ್ಡ ಪ್ರಕರಣಗಳು. ಇವುಗಳಲ್ಲಿ 11 ಮಂದಿಯನ್ನು ಬಂಧಿಸಲಾಗಿತ್ತು.

ಅಂದಾಜು 70 ಲೀಟರ್ ಮದ್ಯ, 320 ಲೀಟರ್ ಶೇಂದಿ, 503 ಲೀಟರ್ ನಕಲಿ ವೈನ್, 53 ಲೀಟರ್ ಕಳ್ಳ ಭಟ್ಟಿ ಸಾರಾಯಿ ವಶಪಡಿಸಿಕೊಳ್ಳಲಾಗಿತ್ತು. 3,865 ಲೀಟರ್ ಕೊಳೆಯನ್ನು ನಾಶಪಡಿಸಲಾಗಿತ್ತು. ಲಾಕ್​ಡೌನ್ ತೆರವಾದ ಬಳಿಕ, 379 ಪ್ರಕರಣ ಪತ್ತೆ ಹಚ್ಚಿದ್ದು, ಇದರಲ್ಲಿ 121 ಮಂದಿಯನ್ನು ಬಂಧಿಸಲಾಗಿದೆ.

ಒಟ್ಟಿನಲ್ಲಿ ಲಾಕ್​ಡೌನ್ ವೇಳೆ ಅಕ್ರಮ ಮದ್ಯ‌ ಮತ್ತು ಮಾದಕ ದ್ರವ್ಯಗಳ ಜಾಲ ಕ್ರಿಯಾಶೀಲವಾಗಿದ್ದವು. ಪೊಲೀಸ್​ ಇಲಾಖೆ ಈ ಸಂಬಂಧ ಹೆಚ್ಚಿನ ಶಿಸ್ತುಕ್ರಮ ಹಾಗೂ ಎಚ್ಚರಿಕೆ ವಹಿಸುವ ತುರ್ತು ಇದೆ.

ABOUT THE AUTHOR

...view details