ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೊರೊನಾ ಸೋಂಕಿನ ವಿಚಾರದಲ್ಲಿ ಮಾರ್ಚ್ ಅಂತ್ಯದ ವೇಳೆಗಾಗಲೇ ಸುದ್ದಿಯಾಗಿತ್ತು. ಜಿಲ್ಲೆಯ ಮೊದಲ ಕೇಸ್, ಜಿಲ್ಲೆಯ ಮೊದಲ ಮರಣ ಪ್ರಕರಣ ಬಂಟ್ವಾಳ ತಾಲೂಕಿನಲ್ಲೇ ಆಗಿದ್ದು, ಇದೀಗ ಒಂದೇ ದಿನ 38 ಪ್ರಕರಣಗಳು ಪತ್ತೆಯಾಗುವುದರ ಮೂಲಕ ಮತ್ತೆ ಹಾಟ್ ಸ್ಪಾಟ್ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಪ್ರಕರಣ ಬಂಟ್ವಾಳ ತಾಲೂಕಿನ ಸಜೀಪಮೂಡದಲ್ಲಿ ಆಗಿದ್ದರೆ, ಏಪ್ರಿಲ್ 19ರಂದು ಬಂಟ್ವಾಳ ಪೇಟೆಯ ಮಹಿಳೆಯೋರ್ವರು ಕೊರೊನಾ ಸೋಂಕು ದೃಢಪಟ್ಟು ಮೃತರಾಗುವುದರೊಂದಿಗೆ ದ.ಕ ಜಿಲ್ಲೆಯ ಪ್ರಥಮ ಸಾವು ಬಂಟ್ವಾಳದ್ದಾಗಿತ್ತು. ಅದಾದ ಬಳಿಕ ಅಕ್ಕಪಕ್ಕದ ಮನೆಗಳ ಮೂವರು ಸೇರಿದಂತೆ 10ಕ್ಕೂ ಅಧಿಕ ಮಂದಿ ತಾಲೂಕಿನಲ್ಲಿ ಸಾವನ್ನಪ್ಪಿದ್ದಾರೆ. ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲೂ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ.