ಬೆಳ್ತಂಗಡಿ: ಕರ್ನಾಟಕ ಮಾನವ ಹಕ್ಕುಗಳ ಸಮಿತಿ, ಬೆಳ್ತಂಗಡಿ ನೇತೃತ್ವದಲ್ಲಿ ವಿವಿಧ ಧರ್ಮಗಳ ಸದಸ್ಯರನ್ನೊಳಗೊಂಡ ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡವನ್ನು ಸರಕಾರಿ ನೌಕರರ ಸಂಘದ ಏಕತಾಭವನದಲ್ಲಿ ಉದ್ಘಾಟನೆ ಮಾಡಲಾಯಿತು.
ಕೋವಿಡ್ ಸೋಂಕಿಗೆ ಒಳಗಾದವರನ್ನು ಶಾಪಗ್ರಸ್ತರು ಎಂಬ ಭಾವನೆಯಿಂದ ನೋಡಲಾಗುತ್ತಿದೆ. ಇದು ಸರಿಯಲ್ಲ, ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ದೇವರ ಆಶೀರ್ವಾದದ ಮುಂದೆ ನಾವೆಲ್ಲ ತೃಣಮಾತ್ರರು ಎಂಬುದನ್ನು ಕೋವಿಡ್ ಎಂಬ ಸೂಕ್ಷ್ಮ ವೈರಾಣು ತೋರಿಸಿಕೊಟ್ಟಿದೆ. ಪ್ರಪಂಚದ ಜೀವರಾಶಿಗಳಲ್ಲಿ ಶ್ರೇಷ್ಠತೆಯ ಜನ್ಮ ಪಡೆದವರು ಮನುಷ್ಯರು. ಅಂತಹ ಮನುಷ್ಯರ ಅಂತಿಮಯಾತ್ರೆಯನ್ನು ಗೌರವಯುತವಾಗಿ ನಡೆಸಿಕೊಡಲು ಮುಂದಾಗಿರುವ ಸರ್ವಧರ್ಮ ಪ್ರಿಯರ ಸಂಘಟನೆ ಅತ್ಯಂತ ಶ್ರೇಷ್ಠವಾದುದು ಈ ತಂಡಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಶುಭ ಹಾರೈಸಿದರು.
ಜಗತ್ತಿಗೆ ಔಷಧ ಹಾಗೂ ಶಸ್ತ್ರಾಸ್ತ್ರ ನೀಡುವಷ್ಟು ಸಾಮರ್ಥ್ಯ ನಮ್ಮಲ್ಲಿದೆ ಎಂದು ಒಂದೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ, ಕಣ್ಣಿಗೆ ಕಾಣದ ವೈರಸ್‌ನ ಮುಂದೆ ಶಕ್ತಿಶಾಲಿ ರಾಷ್ಟ್ರಗಳೇ ಏನೂ ಮಾಡಲಾಗದೇ ಅಸಹಾಯಕ ಸ್ಥಿತಿಗೆ ತಲುಪಿದೆ. ಲಕ್ಷ ಗಟ್ಟಲೆ ಜನ ಸಾಯುತಿದ್ದಾರೆ. ಪರಸ್ಪರ ಶಾಂತಿ ಸೌಹಾರ್ದತೆಯಿಂದ ಜೀವನ ನಡೆಸುವ ಮೂಲಕ ಮಾನವ ಶ್ರೇಷ್ಠ ಜೀವನ ನಮ್ಮದಾಗಬೇಕು ಎಂದರು.