ಬೆಳ್ತಂಗಡಿ (ದಕ್ಷಿಣ ಕನ್ನಡ):ಉಪ್ಪಿನಂಗಡಿಯಲ್ಲಿ ಇತ್ತಿಚೆಗೆ ಪತ್ತೆಯಾದ ಐದು ಸೇನಾ ಗ್ರೆನೇಡ್‌ಗಳನ್ನು ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸ್ ಉನ್ನತಾಧಿಕಾರಿಗಳ ನೇತೃತ್ವದಲ್ಲಿ ನೆಲ್ಯಾಡಿ ಪೊಲೀಸ್ ಹೊರಠಾಣಾ ಪರಿಸರದಲ್ಲಿ ಸಂಪೂರ್ಣ ಸುರಕ್ಷತೆ ಹಾಗೂ ಭದ್ರತೆಯೊಂದಿಗೆ ಇಂದು ನಿಷ್ಕ್ರಿಯಗೊಳಿಸಲಾಯಿತು.
ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿ ಐದು ಸೇನಾ ಗ್ರೆನೇಡ್‌ಗಳು ಪತ್ತೆಯಾಗಿತ್ತು. ಇಳಂತಿಲ ಗ್ರಾಮದ ಜಯಕುಮಾರ್ ಎಂಬುವವರು ತಮ್ಮ ಮನೆಗೆ ತೆರಳುತ್ತಿದ್ದಾಗ ಈ ಗ್ರೆನೇಡ್‌ಗಳು ಅವರಿಗೆ ಗೋಚರಿಸಿವೆ. ಬಳಿಕ ಗ್ರೆನೇಡ್‌ಗಳನ್ನು ಇತರರಿಗೆ ತೊಂದರೆ ಆಗದಂತೆ ಸುರಕ್ಷಿತವಾಗಿ ಬದಿಗಿರಿಸಿದ ಜಯಕುಮಾರ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಸ್ಥಳಕ್ಕಾಗಮಿಸಿ ಬಾಂಬ್ ನಿಷ್ಕ್ರಿಯ ದಳದ ನೆರವಿನೊಂದಿಗೆ ಎಲ್ಲಾ ಗ್ರೆನೇಡ್‌ಗಳನ್ನು ವಶಕ್ಕೆ ಪಡೆದು, ನೆಲ್ಯಾಡಿ ಹೊರಠಾಣೆಯ ಗೌಪ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಇರಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಋಷಿಕೇಶ್ ಭಗವಾನ್ ಸೋನಾವಣೆ ಅವರು, ಈ ಗ್ರೆನೇಡ್‌ಗಳು ಸೇನಾ ಫ್ಯಾಕ್ಟರಿಯಲ್ಲೇ ತಯಾರಾಗಿರುವ ಬಗ್ಗೆ ಮತ್ತು 1979-83 ಎಂಬ ದಿನಾಂಕವೂ ಇದರಲ್ಲಿ ಗೋಚರಿಸುತ್ತಿರುವ ಬಗ್ಗೆ ಹೇಳಿಕೆಯನ್ನು ನೀಡಿದ್ದರು.