ಉಳ್ಳಾಲ(ಮಂಗಳೂರು) : ಅಂಬೇಡ್ಕರ್ ಕಾಲದಲ್ಲಿ ಯಾರಲ್ಲೂ ಕೂಡ ಹಿಂದೂ ರಾಷ್ಟ್ರದ ಭಾವನೆ ಇರಲಿಲ್ಲ. ಹಿಂದೂ ರಾಷ್ಟ್ರ ಬೇಕು ಎಂದು ಬಯಸುವವರು ಇದನ್ನು ಅರ್ಥ ಮಾಡಿಕೊಳ್ಳಲಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಮೋದಿಯವರೇ ನಿಮ್ಮ ಮನೆಯಲ್ಲಿ ದೊಡ್ಡವರಿಲ್ವಾ, ನನ್ನ ಮಾತು, ಸೋನಿಯಾ ಗಾಂಧಿ, ಅಖಿಲೇಶ್ ಯಾದವ್, ಮಾಯಾವತಿ, ಕಮ್ಯುನಿಸ್ಟರ ಮಾತು ಕೇಳಬೇಡಿ. ನಿಮ್ಮ ಪಕ್ಷ ಸ್ಥಾಪನೆ ಮಾಡಿದ ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಪುಸ್ತಕಗಳನ್ನಾದರೂ ಓದಿ ನೋಡಿ. ಎಲ್ಲಿಗೆ ಹೋಗುತ್ತಿದ್ದೀರಿ ನೀವು ಎಂದರು.
ಕಲ್ಲಾಪುವಿನ ಪೌರತ್ವ ಹೋರಾಟ ಸಮಿತಿಯ ಆಶ್ರಯದಲ್ಲಿ ಕಲ್ಲಾಪು ಯುನಿಟ್ ಹಾಲ್ ಮೈದಾನದಲ್ಲಿ ನಡೆದ ಎನ್ಆರ್ಸಿ ಕಾಯ್ದೆ ವಿರುದ್ಧ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, 1789ರಲ್ಲಿ ಅಸ್ತಿತ್ವಕ್ಕೆ ಬಂದ ಅಮೆರಿಕ 1991ರಲ್ಲಿ ತಿದ್ದುಪಡಿ ತಂದು ಧರ್ಮ, ಜಾತಿ ತಾರತಮ್ಯ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಘೋಷಿಸಿತ್ತು. ಅಂಬೇಡ್ಕರ್ ಕೂಡ ಇದನ್ನೇ ಸಂವಿಧಾನದಲ್ಲಿ ಉಲ್ಲೇಖಿಸಿದ್ದಾರೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರು, ಸಂವಿಧಾನ ರಚನೆ ಮಾಡಿದ ಅಂಬೇಡ್ಕರ್ ಜಾತಿ ತಾರತಮ್ಯ ಮಾಡಿಲ್ಲ. ಹಿಂದೂ ಧರ್ಮದ ಮೇಲ್ಜಾತಿಯ ಕಿರುಕುಳ ತಾಳಲಾರದೆ ಅಂಬೇಡ್ಕರ್ ನಾನು ಹಿಂದೂ ಆಗಿ ಸಾಯುವುದಿಲ್ಲ ಎಂದಿದ್ದರು. ಅವರು ಅಂತಿಮವಾಗಿ ಬೌದ್ಧ ಧರ್ಮ ಸ್ವೀಕರಿಸಿದರು ಎಂದರು.