ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿಯ ಸನ್ನಿಧಾನದಲ್ಲಿ ಐವರಿಗೆ ಕ್ಷುಲ್ಲಕ ದೀಕ್ಷೆ - ಕ್ಷುಲ್ಲಕ ದೀಕ್ಷೆ
ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಭಗವಾನ್ ಬಾಹುಬಲಿ ಸ್ವಾಮಿಯ ನಾಲ್ಕನೇ ಮಹಾಮಸ್ತಕಾಭಿಷೇಕ ಮಹೋತ್ಸವ ಐವರು ಕ್ಷುಲ್ಲಕ ದೀಕ್ಷೆ ಸ್ವೀಕರಿಸುವುದರೊಂದಿಗೆ ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು.
ಲೌಕಿಕ ಬದುಕನ್ನು ತ್ಯಜಿಸಿ ಮೋಕ್ಷ ಸಾಧನೆಗಾಗಿ ಐವರು ವೈರಾಗಿಗಳಾಗಿ ಜೈನ ಸಂನ್ಯಾಸತ್ವ ಸ್ವೀಕಾರ ಮಾಡಿದರು. ಪರಮಪೂಜ್ಯ ಆಚಾರ್ಯ ಶ್ರೀ 108 ಪುಷ್ಪದಂತ ಸಾಗರ ಮುನಿರಾಜರು ಸತೀಶ್ ಭಯ್ಯಾಜಿ, ಪೂರನ್ ಭಯ್ಯಾಜಿ, ಪ್ರಭು ಭಯ್ಯಾಜಿ ಎಂಬ ಮೂವರು ಪುರುಷರು ಮತ್ತು ಸಮತಾ ದೀದಿ ಹಾಗೂ ಸಂಯಮ ದೀದಿ ಎಂಬ ಇಬ್ಬರು ಮಹಿಳೆಯರಿಗೆ ಕ್ಷುಲ್ಲಕ ದೀಕ್ಷೆ ನೀಡಿದರು.
ಮೊದಲು ರಾಜರಾಣಿ ಪೋಷಾಕಿನಲ್ಲಿ ಮನೆಯರೊಂದಿಗೆ ಆಗಮಿಸಿದ ಐವರಿಗೆ ಶ್ರೀ 108 ಪುಷ್ಪದಂತ ಸಾಗರ ಮುನಿರಾಜರು ದೀಕ್ಷೆಗೆ ಮೊದಲು ಹಲವಾರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ನಂತರ ಕೇಶಲೋಚನ( ತಲೆ ಕೂದಲು ಕೀಳುವುದು) ನಡೆಸಿ, ಬಳಿಕ ಭಯ್ಯಾಜಿವರು ವಸ್ತ್ರಗಳನ್ನು ಕಳಚಿ ಕೌಪೀನಧಾರಿಗಳಾದರು. ಮಾತಾಜಿಯವರು ಶ್ವೇತವಸ್ತ್ರಧಾರಿಗಳಾದರು.
ಸಂನ್ಯಾಸ ದೀಕ್ಷೆ ಪಡೆದ ಐವರಿಗೂ ಪುಷ್ಪದಂತ ಸಾಗರ ಮುನಿರಾಜರು ಹೊಸದಾಗಿ ನಾಮಕರಣ ಮಾಡಿದರು. ಈ ಸಂದರ್ಭ ದೀಕ್ಷಾಧಾರಿ ಕುಟುಂಬಗಳ ಜೊತೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗವಹಿಸಿದ್ದರು.