ಮಂಗಳೂರು :ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದಲ್ಲಿ 2007ರಲ್ಲಿ ದಾಳಿಗೊಳಗಾಗಿರುವ ಮಂಗಳೂರು ಮನಪಾ ಸಹಾಯಕ ಟೌನ್ ಪ್ಲಾನಿಂಗ್ ಆಫೀಸರ್ ಬಿ ಪಿ ಶಿವರಾಜುಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ 5 ವರ್ಷ ಶಿಕ್ಷೆ ಮತ್ತು 34 ಲಕ್ಷ ರೂ. ದಂಡ ವಿಧಿಸಿ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಮನಪಾ ಸಹಾಯಕ ಟೌನ್ ಪ್ಲಾನಿಂಗ್ ಆಫೀಸರ್ ಬಿ ಪಿ ಶಿವರಾಜುರವರು ತಮ್ಮ ಸೇವಾವಧಿಯಲ್ಲಿ ನಿಗದಿತ ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದಾರೆಂದು ಆಗಿನ ಲೋಕಾಯುಕ್ತ ಇನ್ಸ್‌ಪೆಕ್ಟರ್ ಪ್ರಸನ್ನ ವಿ. ರಾಜು ಮಾಹಿತಿ ಕಲೆ ಹಾಕಿದ್ದರು. ಈ ಹಿನ್ನೆಲೆ ಆಗಿನ ಲೋಕಾಯುಕ್ತ ಉಪಾಧೀಕ್ಷಕರು ಮತ್ತು ಅವರ ತಂಡ ಕೇಸ್ ದಾಖಲಿಸಿ 2007ರ ಜುಲೈ 25ರಂದು ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ಮಾಹಿತಿಗಳನ್ನು ಕಲೆ ಹಾಕಿದಾಗ ಆದಾಯಕ್ಕಿಂತ ಸುಮಾರು 38 ಲಕ್ಷ ರೂ.ನಷ್ಟು ಹೆಚ್ಚಿನ ಆಸ್ತಿ ಪತ್ತೆಯಾದ ಬಗ್ಗೆ ವರದಿಯಾಗಿತ್ತು. ತನಿಖೆಯನ್ನು ಪೂರ್ಣಗೊಳಿಸಿ ಡಿವೈಎಸ್‌ಪಿ ಆಗಿದ್ದ ಡಾ. ಪ್ರಭುದೇವ್ ಮಾಣೆ ಅವರು ಆರೋಪಿ ಶಿವರಾಜು ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಅಭಿಯೋಜನೆಯ ಪರವಾಗಿ 27 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು ಹಾಗೂ 160 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು.
ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರಕಾರಿ ಅಭಿಯೋಜಕ ಕೆ ಎಸ್ ಎನ್ ರಾಜೇಶ್‌ರವರ ವಾದವನ್ನು ಪುರಸ್ಕರಿಸಿ, ಆರೋಪಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಕ್ಕೆ ಬಂದಿತ್ತು.