ಕರ್ನಾಟಕ

karnataka

ETV Bharat / state

ಧರ್ಮಸ್ಥಳದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಜಾರಿಗೆ ಚಾಲನೆ

ಧರ್ಮಸ್ಥಳದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಜಾರಿಯಾಗಿದ್ದು ಡಾ.ಡಿ. ವೀರೇಂದ್ರ ಹೆಗ್ಗಡೆ ಅಧಿಕೃತ ಘೋಷಣೆ ಮಾಡಿದರು.

ಡಾ. ಡಿ.ವೀರೇಂದ್ರ ಹೆಗ್ಗಡೆ
ಡಾ. ಡಿ.ವೀರೇಂದ್ರ ಹೆಗ್ಗಡೆ

By ETV Bharat Karnataka Team

Published : Oct 2, 2023, 10:03 PM IST

ಬೆಳ್ತಂಗಡಿ (ದಕ್ಷಿಣ ಕನ್ನಡ) : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನದಂತೆ ಧರ್ಮಸ್ಥಳ 'ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ' ಎಂದು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು. ಇಂದು ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅವರು ಘೋಷಣಾ ಫಲಕ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಹೆಗ್ಗಡೆ, ಮಹಾತ್ಮ ಗಾಂಧೀಜಿಯವರ ಸ್ಮರಣೆಯೊಂದಿಗೆ ಅವರ ತತ್ವ, ಆದರ್ಶಗಳನ್ನು ನಾವು ಪಾಲಿಸಬೇಕು. ಬೀದರ್, ಕಲಬುರಗಿ, ಮಂಗಳೂರು, ಮೈಸೂರು ಮತ್ತು ಧರ್ಮಸ್ಥಳವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರಗಳನ್ನಾಗಿ ಮಾಡಲು ಆಯ್ಕೆ ಮಾಡಲಾಗಿದೆ. ಈ ಕಾರ್ಯಕ್ಕಾಗಿ ಧರ್ಮಸ್ಥಳ ಗ್ರಾಮ ಪಂಚಾಯಿತಿಯನ್ನು ಅಭಿನಂದಿಸಿ, ಧರ್ಮಸ್ಥಳದ ಮೂಲಕ ಇಡೀ ರಾಜ್ಯವೇ ದೇಶದ ಪ್ರಥಮ ಪ್ಲಾಸ್ಟಿಕ್ ಮುಕ್ತ ರಾಜ್ಯವಾಗಲಿ ಎಂದು ಹಾರೈಸಿದರು.

ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧದಾನ ಎಂಬ ಚತುರ್ವಿಧ ದಾನಗಳು ನಿತ್ಯೋತ್ಸವವಾಗಿರುವ ಧರ್ಮಸ್ಥಳದಲ್ಲಿ ಸ್ಥಳೀಯರು ಹಾಗೂ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಆರೋಗ್ಯ ರಕ್ಷಣೆ ಮತ್ತು ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಧರ್ಮಸ್ಥಳವು ದೇಶದ ಉತ್ತಮ ಸ್ವಚ್ಛ ಧಾರ್ಮಿಕ ಶ್ರದ್ಧಾ ಕೇಂದ್ರ ಎಂಬ ಗೌರವಕ್ಕೆ ಪಾತ್ರವಾಗಿದೆ. ಧರ್ಮಸ್ಥಳದಲ್ಲಿ ಬೀಡಿ, ಸಿಗರೇಟು, ಮದ್ಯ ಮಾರಾಟ ಇರುವುದಿಲ್ಲ. ಈಗಾಗಲೇ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಗ್ರಾಮ ಪಂಚಾಯಿತಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತದೆ. ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದ ಬಗ್ಗೆ ಹಿರಿಯರು ಮಕ್ಕಳಲ್ಲಿ ಅರಿವು, ಜಾಗೃತಿ ಮೂಡಿಸಬೇಕು ಎಂದು ಹೆಗ್ಗಡೆ ಸಲಹೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಪ್ರಸನ್ನಭಕ್ತ ಮಾತನಾಡಿ, ಎಲ್ಲಾ ರಂಗಗಳಲ್ಲಿಯೂ ಪ್ಲಾಸ್ಟಿಕ್ ಬಳಕೆ ಇಂದು ಹೆಚ್ಚಾಗುತ್ತಿದ್ದು, ಭಸ್ಮಾಸುರನಂತೆ ಕಾಡುತ್ತಿದೆ. ವಿದ್ಯಾವಂತ ಹಾಗೂ ಪ್ರಜ್ಞಾವಂತ ನಾಗರಿಕರೇ ಪ್ರಕೃತಿಯನ್ನು ವಿಕೃತಿಗೊಳಿಸುತ್ತಿರುವುದು ಖೇದಕರ. ಪಂಚಭೂತಗಳಿಂದ ಕೂಡಿದ ಪ್ರಶಾಂತವಾದ, ಸ್ವಚ್ಛ, ಸುಂದರ ಪ್ರಕೃತಿ-ಪರಿಸರವನ್ನು ಮುಂದಿನ ಜನಾಂಗಕ್ಕಾಗಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ, ಹೊಣೆಗಾರಿಕೆಯೂ ಆಗಿದೆ ಎಂದು ಹೇಳಿದರು.

ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿಮಲ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್, ಪಿಡಿಒ ಉಮೇಶ್ ಉಪಸ್ಥಿತರಿದ್ದರು.

ಗಾಂಧೀಜಿ ಸಾರಿದ ಸ್ವಚ್ಛತೆ ಮನಸ್ಸಿನಲ್ಲಿ ಬರಬೇಕು- ಶಾಸಕ ಅಶೋಕ್ ಕುಮಾರ್ ರೈ:ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಗಾಂಧಿ ಕಟ್ಟೆ ಸಮಿತಿ ಹಾಗೂ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಗಾಂಧಿ ಕಟ್ಟೆಯಲ್ಲಿ ನಡೆದ ಮಹಾತ್ಮ ಗಾಂಧೀಜಿ ಜಯಂತಿ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅಶೋಕ್​ ಕುಮಾರ್ ರೈ, ಗಾಂಧೀಜಿ ನಿಂತ ಪುತ್ತೂರಿನ ಪುಣ್ಯದ ಮಣ್ಣಿನಲ್ಲಿ ಅವರ ಜನ್ಮಜಯಂತಿ ಆಚರಣೆ ನಡೆಸುತ್ತಿರುವುದು ಪುಣ್ಯದಾಯಕ ಕೆಲಸ. ಗಾಂಧೀಜಿ ಸಾರಿದ ಸ್ವಚ್ಛತೆ ಮನಸ್ಸಿನಲ್ಲಿ ಬರಬೇಕೇ ಹೊರತು ಕಸ ಗುಡಿಸುವ ಫೋಸ್ ಕೊಡುವುದರಲ್ಲಿ ಅಲ್ಲ ಎಂದು ಹೇಳಿದರು.

ಮಹಾತ್ಮಾ ಗಾಂಧೀಜಿ ಅವರ ತ್ಯಾಗ ಮತ್ತು ಬಲಿದಾನ ಇಂದಿಗೂ ಸ್ಮರಣೀಯವಾಗಿದೆ. ಯುದ್ಧ ಕಾಲಯುಗದಲ್ಲಿ ಅಹಿಂಸೆಯ ಮೂಲಕ ಶಾಂತಿಯನ್ನು ಪ್ರತಿಪಾದಿಸಿದ ಗಾಂಧಿ ವಿಶ್ವಕ್ಕೆ ಪ್ರೇರಣೆಯಾಗಿದ್ದಾರೆ. ಅದೇ ರೀತಿ ಇಂದು ಜನ್ಮ ಜಯಂತಿ ಆಚರಿಸುತ್ತಿರುವ ಮಾಜಿ ಪ್ರಧಾನಿ ಲಾಲ್ ಬಹದ್ದೂರು ಶಾಸ್ತ್ರೀಜಿ ಅವರು ಜೈವಾನ್ ಜೈ ಕಿಸಾನ್ ಘೋಷಣೆ ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಅಭಿಪ್ರಾಯಪಟ್ಟರು.

ಪುತ್ತೂರಿನ ಗಾಂಧಿ ಕಟ್ಟೆಯಲ್ಲಿ ಮಹಾತ್ಮ ಗಾಂಧೀಜಿ ಜಯಂತಿ

ಪುತ್ತೂರು ನಗರಸಭೆಯಲ್ಲಿ ಕಳೆದ 20 ವರ್ಷಗಳಿಂದ ಪೌರಕಾರ್ಮಿಕರಾಗಿರುವ ಸೀತಾ, ದಯಾನಂದ ಮತ್ತು ಗುಲಾಬಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ನಡೆಸಲಾದ ಗಾಂಧಿ ಭಾವಚಿತ್ರ ರಚನೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ರಾಮಕೃಷ್ಣ ಪ್ರೌಢಶಾಲಾ ಸ್ಕೌಟ್ಸ್ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆ ನಡೆಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಭಜನಾ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ:ಗಾಂಧೀಜಿ ಅವಮಾನಿಸುವವರ ವಿರುದ್ಧ ಕಾನೂನು ಕ್ರಮಕ್ಕೆ ಚಿಂತನೆ: ಸಚಿವ ಹೆಚ್.ಕೆ.ಪಾಟೀಲ್

ABOUT THE AUTHOR

...view details