ಮಂಗಳೂರು :ದಕ್ಷಿಣ ಕನ್ನಡದ ಜಿಲ್ಲಾಸ್ಪತ್ರೆಯಾಗಿದ್ದ ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಿದ ಮೇಲೆ ಇತರೆ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಸಾಕಷ್ಟು ತೊಂದರೆಯಾಗ್ತಿದೆ. ಸರ್ಕಾರ ತಕ್ಷಣ ವೆನ್ಲಾಕ್ ಆಸ್ಪತ್ರೆಯನ್ನು ಪುನಾರಂಭಿಸಬೇಕು ಎಂದು ಮಾಜಿ ಸಚಿವ ಯು ಟಿ ಖಾದರ್ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸುವಾಗ ಯಾವುದೇ ಚರ್ಚೆ ಮಾಡಿಲ್ಲ. ನಾನು ಮೊದಲೇ ಇದರಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗಲಿದೆ ಎಂದು ತಿಳಿಸಿದ್ದೆ. ಆದರೆ, ಅವರಷ್ಟಕ್ಕೆ ತೀರ್ಮಾನಿಸಿ ಅದನ್ನು ಪೂರ್ತಿ ಕೋವಿಡ್ ಆಸ್ಪತ್ರೆ ಮಾಡಿದ್ದಾರೆ ಎಂದು ದೂರಿದರು.
ವೆನ್ಲಾಕ್ ಆಸ್ಪತ್ರೆ ಇತರ ರೋಗಿಗಳಿಗೂ ಚಿಕಿತ್ಸೆಗೆ ನೀಡಲಿ-ಮಾಜಿ ಸಚಿವ ಯು ಟಿ ಖಾದರ್ ಕೋವಿಡ್ ರೋಗಿಗಳನ್ನು ವೆನ್ಲಾಕ್ ಆಸ್ಪತ್ರೆಯ ಆಯುಷ್ ಬ್ಲಾಕ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಆಯುಷ್ ಬ್ಲಾಕ್ನಲ್ಲಿ ಚಿಕಿತ್ಸೆ ಮುಂದುವರಿಸಿ ಹಳೆ ಕಟ್ಟಡದಲ್ಲಿ ವೆನ್ಲಾಕ್ ಆಸ್ಪತ್ರೆ ಪುನಾರಂಭಿಸಬೇಕು ಎಂದು ಒತ್ತಾಯಿಸಿದರು.
ವೆನ್ಲಾಕ್ ಆಸ್ಪತ್ರೆಯಲ್ಲಿ ಈ ಮೊದಲು ಚಿಕಿತ್ಸೆ ಪಡೆಯುತ್ತಿದ್ದ ಎಪಿಎಲ್, ಬಿಪಿಎಲ್ ರೋಗಿಗಳು ಸರ್ಕಾರದ ನಿರ್ದೇಶನದಂತೆಯೇ ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಆದರೆ, ಖಾಸಗಿ ಆಸ್ಪತ್ರೆಯಲ್ಲಿ ಇವರಿಂದ ಸಾವಿರಾರು ರೂ. ಬಿಲ್ ಮಾಡಿ ಹಣ ಕೀಳುತ್ತಿದ್ದಾರೆ. ಈ ಬಗ್ಗೆ ಕುಂದುಕೊರತೆಗಳನ್ನು ತಿಳಿದುಕೊಳ್ಳಲು ಸರ್ಕಾರ ಒಂದು ಕಾಲ್ ಸೆಂಟರ್ ಕೂಡಾ ಮಾಡಿಲ್ಲ. ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಇವರಿಗೆ ಜನರ ಬಗ್ಗೆ ಕಾಳಜಿಯಿದ್ದರೆ ಖಾಸಗಿ ಆಸ್ಪತ್ರೆಗೆ ಹೋಗಿ ನೋಡಿ ಬರಬೇಕಿತ್ತು ಎಂದು ಮಾಜಿ ಸಚಿವರು ಕಿಡಿ ಕಾರಿದರು.
ವೆನ್ಲಾಕ್ ಹಳೆ ಕಟ್ಟಡದಲ್ಲಿರುವ ಐಸಿಯುವನ್ನು ಕೋವಿಡ್ ಬ್ಲಾಕ್ಗೆ ವರ್ಗಾಯಿಸಿ ತಕ್ಷಣ ಹಳೆ ಕಟ್ಟಡದಲ್ಲಿ ವೆನ್ಲಾಕ್ ಆಸ್ಪತ್ರೆ ತೆಗೆಯಬೇಕು ಎಂದು ಆಗ್ರಹಿಸಿದರು. ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿ ಎರಡು ಜಿಲ್ಲೆಯ ಜನರಿಗಾಗುವ ಸಮಸ್ಯೆ ಬಗ್ಗೆ ನಿನ್ನೆ ಕಾಂಗ್ರೆಸ್ ನಿಯೋಗದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಕಾಸರಗೋಡು ಜಿಲ್ಲಾಧಿಕಾರಿ ಅಲ್ಲಿನ ಪ್ರವೇಶದ ಬಗ್ಗೆ 28 ದಿನದ ಪಾಸ್ ವ್ಯವಸ್ಥೆ ಮಾಡಿದ್ದಾರೆ. ಆದರೆ, ನಮ್ಮ ಜಿಲ್ಲಾಧಿಕಾರಿ ಈ ಕೆಲಸ ಮಾಡಿಲ್ಲ. ನಮ್ಮ ಜಿಲ್ಲೆಗೆ ಏನಾಗಿದೆ? ಯಾಕೆ ಈ ವಿಳಂಬ ಎಂದು ಪ್ರಶ್ನಿಸಿದರು.