ಮಂಗಳೂರು: ಜನಸಾಮಾನ್ಯರಿಗೆ ಆರೋಗ್ಯ ವಿಷಯದಲ್ಲಿ ಏನಾದರೂ ತೊಂದರೆ ಸಂಭವಿಸಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಹೆಲ್ಪ್ ಲೈನ್ ಡೆಸ್ಕ್ ತೆರೆಯಲಿ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಹೇಳುತ್ತಿರುವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗದಿದ್ದಲ್ಲಿ ಇಲ್ಲಿನ ಟೋಲ್ ಫ್ರೀ ಸಂಖ್ಯೆಯ ಮೂಲಕ ಜನರು ತಮ್ಮ ಸಂಕಷ್ಟವನ್ನು ಹೇಳಿಕೊಳ್ಳಲು ಸಾಧ್ಯವಾಗಬೇಕು ಎಂದರು.
ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಸರ್ವರಿಗೂ ಉಚಿತ ಆರೋಗ್ಯ ಸೇವೆ ಹಾಗೂ ಆಯುಷ್ಮಾನ್ ಯೋಜನೆಯಲ್ಲಿ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಪ್ರಚಾರ ಮಾಡುತ್ತಿದೆ. ಆದರೆ ವಾಸ್ತವದಲ್ಲಿ ಈ ಯೋಜನೆಗಳು ಈವರೆಗೆ ಯಾರಿಗೂ ಸಮರ್ಪಕವಾಗಿ ದೊರಕಿಲ್ಲ. ದ.ಕ.ಜಿಲ್ಲೆಯ 73 ಆಸ್ಪತ್ರೆಗಳು ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ಬರುತ್ತವೆ ಎಂದು ಹೇಳಲಾಗುತ್ತಿದೆ. ಆದರೆ ಈ ಸೌಲಭ್ಯ ಕೋವಿಡ್ಗೆ ಮಾತ್ರವಾ ಅಥವಾ ಎಲ್ಲಾ ರೋಗಗಳಿಗೂ ಅನ್ವಯವಾಗಲಿದೆಯೇ ಎಂಬುದರ ಬಗ್ಗೆ ಯಾವುದಕ್ಕೂ ಸ್ಪಷ್ಟನೆಯಿಲ್ಲ ಎಂದರು.
ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಶಾಸಕ ಯು.ಟಿ.ಖಾದರ್ ಹಿಂದೆ ನಾನು ಆರೋಗ್ಯ ಮಂತ್ರಿಯಾಗಿದ್ದಾಗ ಎನ್ಎಚ್ಎಂನವರನ್ನು ಖಾಯಂಗೊಳಿಸಬೇಕೆಂದು ಈಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರು ನನ್ನ ಕಚೇರಿ ಮುಂದೆ ಧರಣಿ ಕುಳಿತಿದ್ದರು. ಈಗ ಏಕೆ ಅವರು ಅಷ್ಟೊಂದು ಧರಣಿ ನಡೆಸುತ್ತಿದ್ದರೂ ಮಾತನಾಡುತ್ತಿಲ್ಲ. ರೇಷನ್ ಕಾರ್ಡ್ಗೆ ಸಂಬಂಧಿಸಿದಂತೆ ಇನ್ನೂ ಅರ್ಜಿ ತೆಗೆದುಕೊಳ್ಳುತ್ತಿಲ್ಲ. ತಕ್ಷಣ ಸರ್ಕಾರ ರೇಷನ್ ಕಾರ್ಡ್ ಅರ್ಜಿ ತೆಗೆದುಕೊಳ್ಳಲು ಆರಂಭಿಸಬೇಕು, ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದ ಆರೋಗ್ಯ ಸಭೆ ಕರೆದು ಸರಿಯಾದ ತೀರ್ಮಾನ ಕೈಗೊಳ್ಳಲಿ ಎಂದು ಖಾದರ್ ಆಗ್ರಹಿಸಿದರು.