ಉಳ್ಳಾಲ: ಗೋಣಿ ಚೀಲದಲ್ಲಿ ಕರುವನ್ನು ಅಕ್ರಮವಾಗಿ ತುಂಬಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಚಾನಕ್ ಆಗಿ ಕೆಳಬಿದ್ದಿದೆ. ಇದರಿಂದ ಕರು ಬದುಕುಳಿದಿರುವ ಘಟನೆ ಉಳ್ಳಾಲ ಪೊಲೀಸ್ ಠಾಣೆಯ ಬಬ್ಬುಕಟ್ಟೆ ಸಮೀಪ ಮಂಗಳವಾರ ತಡರಾತ್ರಿ ನಡೆದಿದೆ.
ಉಳ್ಳಾಲ; ಅಕ್ರಮವಾಗಿ ಗೋಣಿ ಚೀಲದಲ್ಲಿ ಕರು ಸಾಗಾಟ - Mangaluru latest News
ಅಕ್ರಮವಾಗಿ ಗೋಣಿ ಚೀಲದಲ್ಲಿ ಕರುವನ್ನು ತುಂಬಿಸಿಕೊಂಡು ಹೋಗುತ್ತಿದ್ದಾಗ ಚೀಲ ಕೆಳಬಿದ್ದಿದೆ. ಇದರಿಂದ ಕರು ಬದುಕುಳಿದಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಕರು ಸಾಗಾಟ ನಡೆಸುತ್ತಿದ್ದ ಸ್ಕೂಟರಿನಲ್ಲಿದ್ದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಆಕ್ಸೆಸ್ ಸ್ಕೂಟರ್ ಮೂಲಕ ಮೂರು ಮಂದಿ ಖದೀಮರು ಗೋಣಿ ಚೀಲದೊಳಗೆ ಕರುವನ್ನು ತುಂಬಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು. ದಾರಿಮಧ್ಯೆ ರಸ್ತೆಗೆ ಚೀಲ ಬಿದ್ದಾಗ ಯುವಕನೋರ್ವ ಪ್ರಶ್ನಿಸಿದ್ದಾನೆ. ಹೊಟೇಲ್ ತ್ಯಾಜ್ಯ ಕೊಂಡೊಯ್ಯುತ್ತಿರುವುದಾಗಿ ತಿಳಿಸಿದ್ದರು. ಆದರೆ ಕರುವಿನ ಕಾಲುಗಳನ್ನು ಕಂಡ ಸ್ಥಳೀಯ ಯುವಕ ಜೋರಾಗಿ ಕಿರುಚಿಕೊಂಡಿದ್ದಾನೆ.
ಇದರಿಂದ ಗಾಬರಿಗೊಂಡ ಕಿಡಿಗೇಡಿಗಳು ಗೋಣಿಚೀಲವನ್ನು ರಸ್ತೆಗೆ ಎಸೆದು ಪರಾರಿಯಾಗಿದ್ದಾರೆ. ಕೂಡಲೇ ಸ್ಥಳೀಯರು ಗೋಣಿ ಚೀಲ ಪರಿಶೀಲಿಸಿದಾಗ ಅದರೊಳಗೆ ಕರು ಇರುವುದನ್ನು ಗಮನಿಸಿದ್ದಾರೆ. ಕರುವಿನ ಬೆನ್ನಿಗೆ, ಕಾಲಿಗೆ ಗಾಯಗಳಾಗಿದ್ದು, ಬಾಲವನ್ನು ತುಂಡರಿಸಲಾಗಿತ್ತು. ಆಹಾರವಿಲ್ಲದೆ ಸೊರಗಿದ್ದ ಕರುವಿಗೆ ಸ್ಥಳೀಯರು ಅನ್ನ ನೀಡಿ ಆರೈಕೆ ಮಾಡಿದ್ದಾರೆ. ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ.