ಮಂಗಳೂರು: ಅಕ್ರಮವಾಗಿ ರಕ್ತಚಂದನವನ್ನು ಸಂಗ್ರಹಿಸಿಟ್ಟು ವಿದೇಶಕ್ಕೆ ರವಾನೆ ಮಾಡಲು ಯತ್ನಿಸುತ್ತಿದ್ದ ಐವರನ್ನು ಪಣಂಬೂರು ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತ ಬೆಳ್ಳಿಯಪ್ಪ ನೇತೃತ್ವದ ತಂಡ ಬಂಧಿಸಿದೆ.
ಕಾವೂರು ನಿವಾಸಿ ರಾಕೇಶ್ ಶೆಟ್ಟಿ (44), ತೊಕ್ಕೊಟ್ಟು ನಿವಾಸಿ ಲೋಹಿತ್ ಶೆಟ್ಟಿ (35), ಕಲ್ಲಾಪು ನಿವಾಸಿಗಳಾದ ಶೇಕ್ ತಬ್ರೇಝ್ (36), ಫಾರೂಕ್ (45), ಹುಸೈನ್ ಕುಂಞಿಮೋನು (45) ಬಂಧಿತ ಆರೋಪಿಗಳು.
ಪಣಂಬೂರು ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮುಂಗಾರು ಜಂಕ್ಷನ್‌ನಿಂದ ಜೋಕಟ್ಟೆಗೆ ತೆರಳುವ ರಸ್ತೆಯ ಎಡಬದಿಯಲ್ಲಿರುವ ಗೋಡೌನ್‌ವೊಂದರಲ್ಲಿ 2 ಕೋಟಿ ರೂ. ಮೌಲ್ಯದ ರಕ್ತ ಚಂದನವನ್ನು ಅಕ್ರಮವಾಗಿ ದಾಸ್ತಾನಿರಿಸಲಾಗಿತ್ತು. ಎನ್‌ಎಂಪಿಟಿ ಮೂಲಕ ವಿದೇಶಕ್ಕೆ ಹಡಗುಗಳಲ್ಲಿ ಕಳುಹಿಸಲು ತಯಾರಿ ನಡೆಸಿದ್ದರು. ಖಚಿತ ಮಾಹಿತಿ ಮೇರೆಗೆ ಕೂಡಲೇ ಕಾರ್ಯಪ್ರವೃತ್ತರಾದ ಮಂಗಳೂರು ಪೊಲೀಸರು, ಸ್ವತ್ತು ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಎರಡು ಕೋಟಿ ರೂ. ಮೌಲ್ಯದ 4000 ಕೆ.ಜಿ. ರಕ್ತ ಚಂದನ, 10 ಲಕ್ಷ ಮೌಲ್ಯದ ಮಾರುತಿ ಬ್ರೀಝಾ ಕಾರ್, 6 ಲಕ್ಷ ರೂ. ಮೌಲ್ಯದ ರೆನೋ ಪಲ್ಸ್ ಕಾರ್, 3 ಲಕ್ಷ ರೂ. ಮೌಲ್ಯದ ಟಾಟಾ ಏಸ್ ಟೆಂಪೊ, ಎರಡು ಪ್ಲೈವುಡ್ ಬಾಕ್ಸ್, 30 ಸಾವಿರ ಮೌಲ್ಯದ ಏಳು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ವೌಲ್ಯ 2.19 ಕೋಟಿ ರೂ. ಎಂದು ಅಂದಾಜಿಸಲಾಗಿದೆ.