ಮಂಗಳೂರು: ದ.ಕ ಜಿಲ್ಲೆಯಲ್ಲಿ ರೆಡ್ ಬಾಕ್ಸೈಟ್ ದಂಧೆ ನಡೆಯುತ್ತಿದ್ದು, ಅಕ್ರಮವಾಗಿ ಹೊರ ರಾಜ್ಯಗಳಿಗೆ ಮಣ್ಣು ಸಾಗಾಟ ಮಾಡಲಾಗುತ್ತಿದೆಯೆಂಬ ಆರೋಪಗಳು ಕೇಳಿ ಬರುತ್ತಿದೆ. ಸದ್ಯ ಅಕ್ರಮವಾಗಿ ಮಣ್ಣು ದಂಧೆ ನಡೆಸುತ್ತಿರುವವರ ಸೊತ್ತುಗಳನ್ನು ವಶಪಡಿಸಿಕೊಂಡು ಕೋರ್ಟ್ಗೆ ಹಾಜರುಪಡಿಸಲಾಗಿದೆ ಎಂದು ಮಂಗಳೂರು ಉಪ ವಿಭಾಗ ಎಸಿ ಮದನ್ ಮೋಹನ್ ತಿಳಿಸಿದ್ದಾರೆ.
ಮಂಗಳೂರು ಹೊರವಲಯದ ಮುಡಿಪು, ಇರಾ, ಬಾಳೆಪುಣಿ, ಇನ್ನೋಳಿ ಮುಂತಾದ ಕಡೆಗಳಲ್ಲಿ ಅಕ್ರಮವಾಗಿ ರೆಡ್ ಬಾಕ್ಸೈಟ್ ಅಂಶವಿರುವ ಗಟ್ಟಿ ಮುರ ಮಣ್ಣನ್ನು ತಮಿಳುನಾಡು ಹಾಗೂ ಆಂಧ್ರ ಪ್ರದೇಶಗಳಿಗೆ ಲಾರಿಗಳ ಮೂಲಕ ಸಾಗಾಟ ಮಾಡಲಾಗುತ್ತಿದೆ. ಇದರಿಂದ ಪ್ರಾಕೃತಿಕ ಸಂಪತ್ತಿನ ಲೂಟಿಯಾಗುತ್ತಿದೆ. ಖಾಸಗಿ ಭೂಮಿಯನ್ನು ಲೀಸ್ಗೆ ಪಡೆದುಕೊಂಡು ಮಣ್ಣು ಸಾಗಾಟ ಮಾಡುವ ದಂಧೆಕೋರರು ಸರ್ಕಾರಿ ಭೂಮಿಯಲ್ಲಿಯೂ ಅಕ್ರಮವಾಗಿ ಮಣ್ಣು ದಂಧೆಯನ್ನು ವಿಸ್ತರಣೆ ಮಾಡುತ್ತಿದ್ದಾರೆ. ಟನ್ಗೆ 2,500 ಸಾವಿರ ರೂ.ನಂತೆ ಮಾರಾಟ ಮಾಡಲಾಗುತ್ತಿದ್ದು, ಜಾಗದ ಮಾಲೀಕನಿಗೂ ಸಹ ಒಂದು ಲೋಡ್ ಮಣ್ಣಿನಲ್ಲಿ 300-500 ರೂ. ದೊರಕುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಪ್ರತಿನಿತ್ಯ 200-300 ಲೋಡ್ ಪ್ರಾಕೃತಿಕ ಸಂಪತ್ತನ್ನು ಕೊಳ್ಳೆ ಹೊಡೆಯಲಾಗುತ್ತಿದೆ.