ಬೆಳ್ತಂಗಡಿ: ತಾಲೂಕಿನ ನಾವೂರು ಗ್ರಾಮದ ಓಡಿಕಾರು ಎಂಬಲ್ಲಿ ಹಲವು ದಿನಗಳಿಂದ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದ ವಿಚಾರವಾಗಿ, ತಹಶೀಲ್ದಾರ್ ಆದೇಶದ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಓಡಿಕಾರು ಎಂಬಲ್ಲಿ ಹಲವು ದಿನಗಳಿಂದ ಅಕ್ರಮವಾಗಿ ಕಪ್ಪುಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ವಿಚಾರವಾಗಿ ಸ್ವತಃ ತಾಲೂಕಿನ ತಹಶೀಲ್ದಾರ್ ಅವರ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸರು ಮಾ. 19 ರಂದು ದಾಳಿ ನಡೆಸಿದ್ದಾರೆ. ಈ ವೇಳೆ ಭಾರಿ ಸ್ಪೋಟಕ ಸಹಿತ 25 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ವಾಹನ ಮತ್ತು ಸೊತ್ತುಗಳನ್ನು ಜಪ್ತಿ ಮಾಡಿದ್ದಾರೆ.
ಗಣಿಗಾರಿಕೆ ನಡೆಯುತ್ತಿದ್ದ ಸ್ಥಳ ಈ ಸಂಬಂಧ ಲಾಯಿಲ ಪ್ರತೀಕ್ ಕೋಟ್ಯಾನ್ ಮೇಲೆ ಪ್ರಕರಣ ದಾಖಲಾಗಿದೆ. ಅಲ್ಲದೆ ಪ್ರಕರಣ ಸಂಬಂಧ ಇನ್ನಿಬ್ಬರು ಓಡಿಹೋಗಿರುತ್ತಾರೆಂದು ವರದಿಯಾಗಿದೆ.
ವಶಪಡಿಸಿಕೊಂಡ ಸೊತ್ತುಗಳು...
ಕಲ್ಲಿನ ಕೋರೆ ಸ್ಥಳದಲ್ಲಿ ಭಾರಿ ಪ್ರಮಾಣದ ಜಿಲೆಟಿನ್ ಕಡ್ಡಿಗಳು, ವಯರ್‌ಗಳು, 11 ಜೀವಂತ ಮದ್ದುಗಳು, 15 ಚೀಲದಲ್ಲಿ ಜಿಲೆಟಿನ್ ಕಡ್ಡಿಗಳು, ಟ್ರಾಕ್ಟರ್, ಎರಡು ಹಿಟಾಚಿಗಳು ಸಹಿತ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಡಿಆರ್‌ಡಿಒ ಪೊಲೀಸರಿಂದ ಈ ಅಕ್ರಮ ಸ್ಫೋಟಕಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಗಿದೆ. ತಹಶೀಲ್ದಾರ್ ಅವರ ದಾಳಿಯ ವೇಳೆ ಸದ್ರಿ ಜಾಗದ ಮಾಲಿಕತ್ವದ ಬಗ್ಗೆ ದಿಶಾಕ್ ಆಪ್ ಮೂಲಕ ನೋಡಿದಾಗ ಸರ್ವೆ ನಂಬ್ರ:45/12 ಸ್ಥಳವು ಸೇವಿಯರ್ ಪಾಲೇಲಿ ಎಂಬವರಿಗೆ ಸೇರಿದ್ದೆಂದು ತಿಳಿದು ಬಂದಿದ್ದು, ತನಿಖೆ ಪ್ರಗತಿಯಲ್ಲಿದೆ.
ಬೆಳ್ತಂಗಡಿ ಉಪ ನಿರೀಕ್ಷಕ ನಂದ ಕುಮಾರ್, ಗಣಿ ಮತ್ತು ಭೂ ಗಣಿವಿಜ್ಞಾನ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.