ಮಂಗಳೂರು :ವಿದೇಶಕ್ಕೆ ಅಕ್ರಮ ಗಾಂಜಾ ಸಾಗಾಟ ಮಾಡಲು ಯತ್ನಿಸಿದ್ದ ಆರೋಪಿದಡಿ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಐದು ವರ್ಷ ಕಾರಾಗೃಹ ವಾಸ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಿದೆ.
2013ರ ಸೆಪ್ಟಂಬರ್ 21ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 1.470 ಗ್ರಾಂ ಗಾಂಜಾ ಹಾಗೂ 24 ಗಾಂಜಾ ಚಾಕಲೆಟ್‌ನ್ನು ವಿದೇಶಕ್ಕೆ ಸಾಗಾಟ ಮಾಡಲು ಅಮಲ್‌ದೇವ್ ಯತ್ನಿಸಿದ್ದನು. ಏರ್ ಇಂಡಿಯಾ ಸೆಕ್ಯುರಿಟಿಯ ತಪಾಸಣೆ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಮುಂದಿನ ಕ್ರಮಕ್ಕೆ ಬಜ್ಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಅಂದಿನ ಪೊಲೀಸ್ ನಿರೀಕ್ಷಕ ದಿನಕರ್ ಶೆಟ್ಟಿ ತನಿಖಾ ಸಹಾಯಕ ಪ್ರಕಾಶಮೂರ್ತಿ ಸಹಾಯ ಪಡೆದು ತನಿಖೆ ನಡೆಸಿ, ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡ ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಕಾರ್ಯಾಚರಣೆಗಿಳಿದ ಪೊಲೀಸರು, ಆರೋಪಿಯನ್ನು ಕೇರಳದ ನಿಲೇಶ್ವರದಲ್ಲಿ ಪತ್ತೆ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಆರೋಪಿಯ ವಿಚಾರಣೆ ಕೈಗೊಂಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗೆ ಐದು ವರ್ಷ ಕಾರಾಗೃಹ ವಾಸ ಮತ್ತು ಒಂದು ಲಕ್ಷ ರೂ. ದಂಡವನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ.