ಮಂಗಳೂರು:ಇತ್ತೀಚೆಗೆ ನಗರದ ಅಡ್ಯಾರ್ನ ಅರ್ಕುಳ ಕೋಟೆ ಎಂಬಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡಿ, ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿ ಬಾತೀಶ್ ಎಂಬಾತನ ಆಸ್ತಿ ಮುಟ್ಟುಗೋಲು ಹಾಕುವ ಬಗ್ಗೆ ನೋಟಿಸ್ ಜಾರಿಮಾಡಲಾಗಿದೆ.
ಇದು ನೂತನ ಕಾಯ್ದೆಯ ಮೊದಲ ಕ್ರಮ ಎಂದು ಹೇಳಲಾಗಿದೆ. ಮಂಗಳೂರು ವಿಭಾಗ ಸಹಾಯಕ ಆಯುಕ್ತರು ಆರೋಪಿ ಬಾತೀಶ್ಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ವಿಪಕ್ಷ ಉಪನಾಯಕ ಯು ಟಿ ಖಾದರ್ ಅಕ್ರಮ ಗೋ ಹತ್ಯೆ ಪ್ರಕರಣಗಳಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ 2020ರನ್ವಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಈ ಹಿನ್ನೆಲೆ ಆಸ್ತಿ ಮುಟ್ಟುಗೋಲಿಗೆ ನೋಟಿಸ್ ಜಾರಿಗೊಳಿಸಿದೆ.
ಜುಲೈ 3ರಂದು ಕಂಕನಾಡಿ ಗ್ರಾಮಾಂತರ ಠಾಣೆಯ ಪೊಲೀಸರು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ 95ಕೆಜಿ ಜಾನುವಾರು ಮಾಂಸ, ತೂಕದ ಯಂತ್ರಗಳು, ಕತ್ತಿ, ಮರದ ದಿಮ್ಮಿ, ಪ್ಲಾಸ್ಟಿಕ್ ಸಾಮಾಗ್ರಿಗಳು, ಕಬ್ಬಿಣದ ಕೊಕ್ಕೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಈತ ಎ.ಕೆ.ಖಾಲಿದ್ ಎಂಬುವರ ಮನೆಗೆ ಹೊಂದಿಕೊಂಡಿರುವ ಶೆಡ್ನಲ್ಲಿ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದು, ದಾಳಿ ವೇಳೆ ಆರೋಪಿ ಪರಾರಿಯಾಗಿದ್ದ. ಜುಲೈ 12 ರಂದು ಮಧ್ಯಾಹ್ನ 3ಗಂಟೆಗೆ ಆರೋಪಿ ಬಾತೀಶ್ ಗೆ ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಕೋಳಿ ಫಾರಂ ತೆರವಿಗೆ ದಿನವಿಡೀ ರಸ್ತೆ ತಡೆದು ಪ್ರತಿಭಟಿಸಿದ ಗ್ರಾಮಸ್ಥರು
ಜನಪ್ರತಿನಿಧಿಗಳು ಅವಿವೇಕಿಗಳಾಗಬಾರದು-ಖಾದರ್:ಗೋಹತ್ಯೆ ಪ್ರಕರಣದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ 2020ರನ್ವಯ ಕ್ರಮ ಕೈಗೊಂಡು ಆಸ್ತಿ ಮುಟ್ಟುಗೋಲು ಮಾಡುವಂತೆ ಶಾಸಕ ಭರತ್ ಶೆಟ್ಟಿ ಸೂಚನೆ ನೀಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ಉಪನಾಯಕ ಯು ಟಿ ಖಾದರ್, ಜನಪ್ರತಿನಿಧಿಗಳು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕೇ ಹೊರತು ಸಮಸ್ಯೆಗಳನ್ನು ಸೃಷ್ಟಿಸುವುದು ಸರಿಯಲ್ಲ.
ಜನಪ್ರತಿನಿಧಿಗಳು ವಿವೇಕಯುತವಾಗಿ ಮಾತನಾಡಬೇಕು. ಅದನ್ನು ಬಿಟ್ಟು ಅವಿವೇಕಿಗಳಂತೆ ಹೇಳಿಕೆಗಳನ್ನು ಕೊಡಬಾರದು. ಈ ಬಗ್ಗೆ ಕಾನೂನು ಜಾರಿ ಮಾಡಬೇಕೆಂದಿದ್ದರೆ ಸಚಿವ ಮಾಧುಸ್ವಾಮಿಯವರಲ್ಲಿ ಹೇಳಲಿ ಎಂದರು.