ಪುತ್ತೂರು: ಮಾರುತಿ ಓಮ್ನಿಯಲ್ಲಿ ಕೇರಳಕ್ಕೆ ಅಕ್ರಮವಾಗಿ ಹಸು ಕರು ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣೆ ನಡೆಸಿದ ಪುತ್ತೂರು ಪೊಲೀಸರು, ವಾಹನದಲ್ಲಿ ಕಟ್ಟಿ ಹಾಕಿದ್ದ ಕರು ರಕ್ಷಣೆ ಮಾಡಿದ್ದಾರೆ. ನರಿಮೊಗರು ಸಮೀಪದ ಪುರುಷರಕಟ್ಟೆಯಲ್ಲಿ ಘಟನೆ ನಡೆದಿದೆ.
ಮಾರುತಿ ಓಮ್ನಿಯಲ್ಲಿ ಅಕ್ರಮವಾಗಿ ಆಕಳ ಕರು ಸಾಗಾಟ ಯತ್ನ: ಪುತ್ತೂರು ಪೊಲೀಸರಿಂದ ಕಾರ್ಯಾಚರಣೆ - ಪುತ್ತೂರು ಸುದ್ದಿ
ಅಕ್ರಮವಾಗಿ ಹಸು ಕರು ಸಾಗಾಟ ಮಾಡುತ್ತಿರುವ ಆರೋಪದ ಮೇಲೆ ಓಮ್ನಿ ಕಾರು ಹಾಗೂ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಇಬ್ಬರನ್ನೂ ಬಿಡುಗಡೆ ಮಾಡಿದ್ದಾರೆ.
ಮಾರುತಿ ಓಮ್ನಿ ಚಾಲಕ ಕಾಸರಗೋಡು ಬಂದಡ್ಕ ನಿವಾಸಿ ಶಿವಪ್ರಸಾದ್ ಭಟ್(52) ಮತ್ತು ಬಂದಡ್ಕದ ಮಾಣಿಮೂಲೆ ನಿವಾಸಿ ಚಂದ್ರನ್ ಟಿ(34) ಬಂಧಿತ ಆರೋಪಿಗಳು. ಮಾರುತಿ ಓಮ್ನಿ ( KL 14 L 7819) ನ್ನು ವಶ ಪಡಿಸಿಕೊಳ್ಳಲಾಗಿದೆ.
ಹಿಂದೂ ಜಾಗರಣಾ ವೇದಿಕೆ ಸಂಘಟನೆಯ ಮಾಹಿತಿಯಂತೆ ಪೊಲೀಸರು ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿ ನರಿಮೊಗರು ಕಡೆಯಿಂದ ಬರುತ್ತಿರುವ ಮಾರುತಿ ಓಮ್ನಿಯನ್ನು ತಡೆದು ತಪಾಸಣೆ ನಡೆಸಿದಾಗ ಓಮ್ನಿಯ ಹಿಂದಿನ ಸೀಟ್‌ನಲ್ಲಿ ಒಂದೂವರೆ ವರ್ಷದ ಕರುವೊಂದನ್ನು ಕಟ್ಟಿ ಹಾಕಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಗೋ ಸಾಗಾಟಕ್ಕೆ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದು, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.