ಕರ್ನಾಟಕ

karnataka

ETV Bharat / state

ಕೊರೊನಾ ನೆಗೆಟಿವ್​ ವರದಿ ಬಂದವರು ಮೂರೇ ದಿನದಲ್ಲಿ ಮನೆಗೆ: ದ.ಕ ಜಿಲ್ಲಾಧಿಕಾರಿ - Home Quarantine for Travelers

ದುಬೈನಿಂದ ಬಂದವರ ಎಲ್ಲರ ಗಂಟಲು ದ್ರವ ಪರೀಕ್ಷೆಗೆ ರವಾನಿಸಿದ್ದು, ಈ ವಿಭಾಗದಲ್ಲಿ ಯಾರೆಲ್ಲಾ ಬರುತ್ತಾರೋ ಅವರ ವರದಿ ನೆಗೆಟಿವ್ ಬಂದಲ್ಲಿ ಹೋಮ್ ಕ್ವಾರಂಟೈನ್ ಮುದ್ರೆ ಹಾಕಿ ಮನೆಗೆ ಕಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದರು.

If Corona Negative reported for regarding persons they will sent to home
ಕೊರೊನ ನೆಗೆಟಿವ್​ ವರದಿ ಬಂದವರು ಮೂರೇ ದಿನದಲ್ಲಿ ಮನೆಗೆ: ಜಿಲ್ಲಾಧಿಕಾರಿ

By

Published : May 13, 2020, 11:47 PM IST

ಮಂಗಳೂರು (ದಕ್ಷಿಣ ಕನ್ನಡ):ವಿದೇಶದಿಂದ ಬಂದು ಕ್ವಾರಂಟೈನ್​​​ನಲ್ಲಿ 14 ದಿನಗಳ ಕಾಲ ಇರಲು ಸಮಸ್ಯೆ ಇರುವ ಗರ್ಭಿಣಿಯರು, ಹತ್ತರ ಒಳಗಿನ ಮಕ್ಕಳು, 80ರ ಮೇಲಿನ ವೃದ್ಧರು, ಆರೋಗ್ಯ ಸಮಸ್ಯೆ ಇರುವವರ ಮೊದಲ ಗಂಟಲು ದ್ರವ ತಪಾಸಣೆಯಲ್ಲಿ ನೆಗೆಟಿವ್ ವರದಿ ಬಂದರೆ 3 ದಿನದಲ್ಲಿ ಅವರನ್ನು ಮನೆಗೆ ಕಳುಹಿಸಬಹುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದರು. ಆದರೆ ಅವರನ್ನು ಹೋಮ್ ಕ್ವಾರಂಟೈನ್ ಮಾಡಬೇಕು ಎಂದು ರಾಜ್ಯ ಸರ್ಕಾರ ಹೊಸ ಕಾನೂನು ಜಾರಿಗೊಳಿಸಿದೆ ಎಂದಿದ್ದಾರೆ.

ತಮ್ಮ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಎಲ್ಲರ ಗಂಟಲು ದ್ರವ ಪರೀಕ್ಷೆಗೆ ರವಾನಿಸಿದ್ದು, ಈ ವಿಭಾಗದಲ್ಲಿ ಯಾರೆಲ್ಲಾ ಬರುತ್ತಾರೋ ಅವರ ವರದಿ ನೆಗೆಟಿವ್ ಬಂದಲ್ಲಿ ಹೋಮ್ ಕ್ವಾರಂಟೈನ್ ಮುದ್ರೆ ಹಾಕಿ ಮನೆಗೆ ಕಳಿಸಲಾಗುವುದು ಎಂದು ಹೇಳಿದರು.

ನಗರಕ್ಕೆ ನಿನ್ನೆ ದುಬೈಯಿಂದ ಆಗಮಿಸಿದ ವಿಮಾನದಲ್ಲಿ 40 ಗರ್ಭಿಣಿಯರಿದ್ದು, ಅವರಿಗೆ ನಿನ್ನೆ, ಇಂದು ಬೆಳಗ್ಗೆ ಸ್ತ್ರೀರೋಗ ತಜ್ಞರ ಸಹಿತ ಆರೋಗ್ಯ ಅಧಿಕಾರಿಗಳ ತಂಡ ಸಮಗ್ರ ಆರೋಗ್ಯ ತಪಾಸಣೆ ಮಾಡಿದೆ. ಜೊತೆಗೆ ಗಂಟಲು ದ್ರವವನ್ನು ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದರು.

ನಿನ್ನೆ ದುಬೈನಿಂದ ಬಂದ ವಿಮಾನದಲ್ಲಿ ಪ್ರಯಾಣಿಕರು ಹೊರ ಬರುವಾಗ ಸಾಕಷ್ಟು ಸಮಯವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ಇದು ವಿಶೇಷ ವಿಮಾನವಾಗಿದ್ದು, ತಲಾ 20ರಂತೆ ವಿಮಾನದಿಂದ ಪ್ರಯಾಣಿಕರನ್ನು ಹೊರ ಕಳಿಸಿ ತಪಾಸಣೆ ಮಾಡಲಾಗುತ್ತದೆ. ಬಳಿಕ‌ ಕೋವಿಡ್ ಸೋಂಕಿನ ಪರಿಣಾಮ ಸ್ಕ್ರೀನಿಂಗ್, ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಒಂದು ವಿಮಾನ ಲ್ಯಾಂಡ್ ಆದ ಬಳಿ ಕನಿಷ್ಠ ಪಕ್ಷ 3-4 ಗಂಟೆ ಪ್ರಯಾಣಿಕರು ಹೊರ ಬರಲು ಸಮಯ ತಗಲುತ್ತದೆ. ಅಲ್ಲದೆ ಇಮಿಗ್ರೇಷನ್, ಕಸ್ಟಮ್ ಪರಿಶೀಲನೆ ನಡೆಸಲಾಗುತ್ತದೆ. ಇದರಿಂದ ತಡವಾಗೋದು ಸಹಜ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದರು.

ನಿನ್ನೆ ಅನಿವಾಸಿ ಭಾರತೀಯರನ್ನು ದುಬೈನಿಂದ ಕರಾವಳಿಗೆ ಕರೆ ತಂದ ವಿಮಾನ 10.15ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ. ಅದರಲ್ಲಿ 40 ಗರ್ಭಿಣಿಯರ ಸಹಿತ 179 ಪ್ರಯಾಣಿಕರು ಆಗಮಿಸಿದ್ದಾರೆ. ಇದು ಪ್ರಯಾಣ ದರ ದುಬಾರಿ ಇರುವ ವಿಮಾನವಾಗಿದೆ. ಅಲ್ಲದೆ ಬರುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗಬೇಕೆಂದು ನಿಯಮಕ್ಕೆ ಒಪ್ಪಿದವರನ್ನು ಮಾತ್ರ ಕರೆ ತರಲಾಗಿತ್ತು.

ಕ್ವಾರಂಟೈನ್ ವ್ಯವಸ್ಥೆಗೂ ಹೊಟೇಲ್​ಗಳನ್ನು ಗ್ರೇಡ್ 1, ಗ್ರೇಡ್ 2 ಅಂತ ಮಾಡಲಾಗಿತ್ತು. ಹೊಟೇಲ್​ನ 14 ದಿನಗಳ ದರದ ಮಾಹಿತಿಯನ್ನು ವೆಬ್‌ಸೈಟ್​​ನಲ್ಲಿ ತಿಳಿಸಲಾಗಿತ್ತು. ಇದು ಸರಕಾರದ ಆದೇಶವಾಗಿದ್ದು, ಇದಕ್ಕೆ ಒಪ್ಪಿದವರನ್ನು ಮಾತ್ರ ಕರೆ ತರಲಾಗಿದೆ.

ABOUT THE AUTHOR

...view details