ಮಂಗಳೂರು (ದ.ಕ): ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಗುತ್ತಿಗೆ ತೆಗೆದುಕೊಂಡ ಅದಾನಿ ಸಂಸ್ಥೆಯವರು ನಾಮಫಲಕದಲ್ಲಿ ಅದಾನಿ ಹೆಸರನ್ನು ತೆಗೆಯದಿದ್ದರೆ ನಾಮಫಲಕಕ್ಕೆ ಮಸಿ ಬಳಿಯುತ್ತೇವೆ ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದಾನಿ ಸಂಸ್ಥೆಯವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗುತ್ತಿಗೆಯನ್ನು ಪಡೆದುಕೊಂಡ ಬಳಿಕ ನಾಮಫಲಕದಲ್ಲಿ ತಮ್ಮ ಸಂಸ್ಥೆಯ ಹೆಸರನ್ನು ಹಾಕಿದ್ದಾರೆ. ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾವು ಈ ಬಗ್ಗೆ ಅದಾನಿ ಸಂಸ್ಥೆಗೆ ನೋಟಿಸ್ ನೀಡಿರುವುದಾಗಿ ಮಾಹಿತಿ ಹಕ್ಕಿನಲ್ಲಿ ಸಾಮಾಜಿಕ ಕಾರ್ಯಕರ್ತ ದಿಲ್ ರಾಜ್ ಆಳ್ವ ಎಂಬುವರಿಗೆ ಉತ್ತರಿಸಿದೆ.
ಮಂಗಳೂರು ವಿಮಾನ ನಿಲ್ದಾಣದಿಂದ ಅದಾನಿ ಹೆಸರು ತೆಗೆಯದಿದ್ದರೆ ಮಸಿ ಬಳಿಯುತ್ತೇವೆ: ಐವನ್ ಡಿಸೋಜ ಅದಾನಿ ಸಂಸ್ಥೆಯವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಾಮಫಲಕದಲ್ಲಿ ಹಾಕಿರುವ ಹೆಸರನ್ನು ತೆಗೆಯದಿದ್ದರೆ ನಾವೇ ತೆಗೆಯುತ್ತೇವೆ. ಮಸಿ ಬಳಿಯಲು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಸಿದ್ಧರಾಗಿದ್ದಾರೆ ಎಂದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಮೂಲ ಸೌಕರ್ಯಗಳ ಕೊರತೆಯಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾನ್ಯತೆ ಇದ್ದರೂ ಮೂಲಭೂತ ಸೌಕರ್ಯ ನೀಡಲು ವಿಫಲರಾಗಿದ್ದಾರೆ. ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಕೇಂದ್ರ ಸರ್ಕಾರದ ವೈಫಲ್ಯವಿದು. ವೇಳಾಪಟ್ಟಿಯಲ್ಲಿ ಸಮಸ್ಯೆಯಾಗಿರುವುದರಿಂದ ಪ್ರಯಾಣಿಕರಿಲ್ಲದೆ ದೆಹಲಿ-ಮಂಗಳೂರು ನೇರ ವಿಮಾನ ಸ್ಥಗಿತಗೊಂಡಿದೆ. ಇತರ ವಿಮಾನಯಾನಗಳ ಸೇವೆಯಲ್ಲಿ ಕಡಿತವಾಗಿದೆ ಎಂದು ಆರೋಪಿಸಿದರು.