ಕರ್ನಾಟಕ

karnataka

ETV Bharat / state

ಮಂಗಳೂರಿನ ಕರ್ಣಾಟಕ ಬ್ಯಾಂಕ್​ ಪ್ರಧಾನ ಕಚೇರಿಗೆ ಐಬಿಎ ಅಧ್ಯಕ್ಷರ ಭೇಟಿ - IBA President visit Karnataka Bank Headquarters

ಬದಲಾಗುತ್ತಿರುವ ಸನ್ನಿವೇಶಗಳಿಗೆ ಹಾಗೂ ಸವಾಲುಗಳಿಗೆ ಬ್ಯಾಂಕಿಂಗ್ ರಂಗ ತನ್ನನ್ನು ಒಡ್ಡಿಕೊಂಡು ತಂತ್ರಜ್ಞಾನದ ಸಹಾಯದಿಂದ ವಿನೂತನವಾಗಿ ಹೊರ ಹೊಮ್ಮಬೇಕು. ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯಕ್ಷಮತೆಯನ್ನು ರೂಢಿಸಿಕೊಳ್ಳಬೇಕು ಎಂದು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ​​(ಐಬಿಎ) ಅಧ್ಯಕ್ಷ ರಾಜಕಿರಣ ರೈ ತಿಳಿಸಿದರು.

IBA President visit Karnataka Bank Headquarters
ಮಂಗಳೂರಿನ ಕರ್ಣಾಟಕ ಬ್ಯಾಂಕ್​ ಪ್ರಧಾನ ಕಚೇರಿಗೆ ಐಬಿಎ ಅಧ್ಯಕ್ಷ ಭೇಟಿ

By

Published : Jan 20, 2021, 12:01 PM IST

Updated : Jan 20, 2021, 12:54 PM IST

ಮಂಗಳೂರು:ನಗರದಲ್ಲಿರುವ ಕರ್ಣಾಟಕ ಬ್ಯಾಂಕ್​​ನ ಪ್ರಧಾನ ಕಚೇರಿಗೆ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ​​(ಐಬಿಎ) ಅಧ್ಯಕ್ಷ ರಾಜಕಿರಣ ರೈ ಅವರು ಭೇಟಿ ನೀಡಿದರು.

ಕರ್ಣಾಟಕ ಬ್ಯಾಂಕ್​ನ ಆಹ್ವಾನದ ಮೇರೆಗೆ ಪ್ರಧಾನ ಕಚೇರಿಗೆ ಭೇಟಿ ನೀಡಿದ ಅವರನ್ನು ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಮಹಾಬಲೇಶ್ವರ ಎಂ.ಎಸ್ ಅವರು ಸ್ವಾಗತಿಸಿದರು. ಈ ಸಂದರ್ಭ ಬ್ಯಾಂಕ್​ನ ಉನ್ನತ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ರಾಜಕಿರಣ ರೈ ಅವರು, ಪ್ರಸ್ತುತ ಕ್ಷಿಪ್ರ ಬದಲಾವಣೆ ಹೊಂದುತ್ತಿರುವ ಕಾಲಘಟ್ಟದಲ್ಲಿ ಬ್ಯಾಂಕ್ ರಂಗದಲ್ಲಿಯೂ ಕ್ಷಿಪ್ರ ಬದಲಾವಣೆ ಆಗುತ್ತಿದೆ. ಈ ಮುಂಚೆ ಬ್ಯಾಂಕಿಂಗ್ ರಂಗದಲ್ಲಿ ಬದಲಾವಣೆ ಆಗಬೇಕಿದ್ದರೆ ಎರಡು - ಎರಡೂವರೆ ದಶಕಗಳ ಸಮಯ ತೆಗೆದುಕೊಳ್ಳುತ್ತಿತ್ತು. ಈಗ ನೂತನ ತಂತ್ರಜ್ಞಾನ ಆವಿಷ್ಕಾರದಿಂದಾಗಿ ಬ್ಯಾಂಕ್ ರಂಗ ಕ್ಷಿಪ್ರವಾಗಿ ಬದಲಾಗುತ್ತಿದೆ.

ಬದಲಾಗುತ್ತಿರುವ ಸನ್ನಿವೇಶಗಳಿಗೆ ಹಾಗೂ ಸವಾಲುಗಳಿಗೆ ಬ್ಯಾಂಕಿಂಗ್ ರಂಗ ತನ್ನನ್ನು ಒಡ್ಡಿಕೊಂಡು ತಂತ್ರಜ್ಞಾನದ ಸಹಾಯದಿಂದ ವಿನೂತನವಾಗಿ ಹೊರ ಹೊಮ್ಮಬೇಕು. ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯಕ್ಷಮತೆಯನ್ನು ರೂಢಿಸಿಕೊಳ್ಳಬೇಕು. ಈಗಿನ ಕಾಲಘಟ್ಟವು ಅತ್ಯಂತ ಸವಾಲಿನದ್ದಾಗಿದ್ದು ಬದಲಾವಣೆಗಳನ್ನು ಮುಂಚಿತವಾಗಿ ಗ್ರಹಿಸಿ ಅದಕ್ಕನುಗುಣವಾಗಿ ಸಾಗುವುದು ಅನಿವಾರ್ಯವಾಗಿದೆ.

ಯುವ ಪೀಳಿಗೆಯ ಮನಸ್ಥಿತಿಯನ್ನು ಅರಿತು ಡಿಜಿಟಲ್ ತಂತ್ರಜ್ಞಾನದ ಎಲ್ಲ ಆವಿಷ್ಕಾರಗಳನ್ನು ಮೈಗೂಡಿಸಿಕೊಂಡು ಮುನ್ನುಗ್ಗಿದಾಗ ಯಶಸ್ಸು ಖಂಡಿತ ಸಿಗಲಿದೆ. ಕರಾವಳಿ ಕರ್ನಾಟಕದ ಹೆಮ್ಮೆಯ ಬ್ಯಾಂಕ್ ಆದ ಕರ್ಣಾಟಕ ಬ್ಯಾಂಕ್ ಸಾಧನೆ ಪ್ರಶಂಸಾರ್ಹ ಎಂದರು.

ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಮಹಾಬಲೇಶ್ವರ ಎಂ.ಎಸ್ ಅವರು ಮಾತನಾಡಿ, ಕರ್ಣಾಟಕ ಬ್ಯಾಂಕಿನ ಇತಿಹಾಸದಲ್ಲಿಯೇ ಭಾರತೀಯ ಬ್ಯಾಂಕ್‌ಗಳ ಸಂಘದ ಅಧ್ಯಕ್ಷರು ನಮ್ಮಲ್ಲಿಗೆ ಭೇಟಿ ನೀಡಿರುವುದು ಸಂತಸ ತಂದಿದೆ. ಅವರ ಮಾರ್ಗದರ್ಶನದ ಮಾತುಗಳನ್ನು ನಾವು ಈಗಾಗಲೇ ಅನುಷ್ಠಾನಕ್ಕೆ ತಂದಿದ್ದೇವೆ. ಕೆಬಿಎಲ್ ವಿಕಾಸ್ ಎಂಬ ಪರಿವರ್ತನಾ ಜೈತ್ರಯಾತ್ರೆಗೆ ನಮ್ಮನ್ನು ನಾವು ಈಗಾಗಲೇ ಒಡ್ಡಿಕೊಂಡು ಬದಲಾಗುತ್ತಿರುವ ಕಾಲಘಟ್ಟಕ್ಕನುಗುಣವಾಗಿ ಹೆಜ್ಜೆಯಿಡುತ್ತಿದ್ದೇವೆ ಎಂದರು.

Last Updated : Jan 20, 2021, 12:54 PM IST

ABOUT THE AUTHOR

...view details