ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಂಗಳೂರು:ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ ಅವರಿಗೆ ಖಾಯಂ ಉದ್ಯೋಗ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಮಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಗೆ ಅನುಕಂಪದ ಆಧಾರದಲ್ಲಿ ಹಿಂದಿನ ಸಿಎಂ ಬೊಮ್ಮಾಯಿ ಅವರ ವಿಶೇಷ ಅಧಿಕಾರದಲ್ಲಿ ಸರ್ಕಾರಿ ಉದ್ಯೋಗ ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಅವರನ್ನು ಕೆಲಸದಿಂದ ವಜಾಗೊಳಿಸುವ ಕಾರ್ಯ ಮಾಡಿದೆ. ಆದ್ದರಿಂದ ಅನುಕಂಪದ ಆಧಾರದಲ್ಲಿ ಅವರಿಗೆ ಕೆಲಸ ನೀಡಿರುವುದರಿಂದ ಅವರ ವೃತ್ತಿಯನ್ನು ಮುಂದುವರಿಸಬೇಕೆಂದು ಎಂದು ನೂತನ ಸಿಎಂ ಸಿದ್ದರಾಮಯ್ಯ ಅವರಿಗೆ ವಿನಂತಿ ಮಾಡಿದರು.
ಒಂದು ವೇಳೆ ಆ ಬಳಿಕವೂ ರಾಜ್ಯ ಸರ್ಕಾರ ಅವರಿಗೆ ಉದ್ಯೋಗ ನೀಡುವಲ್ಲಿ ವಿಫಲವಾದರೆ ಕೇಂದ್ರ ಸರ್ಕಾರ ಪ್ರಾಯೋಜಿತ ಎನ್ಎಂಪಿಎನಲ್ಲಿ ಉದ್ಯೋಗ ಕೊಡಿಸುವ ಕಾರ್ಯ ಮಾಡಲಾಗುತ್ತದೆ. ಅವರಿಗೆ ಖಾಯಂ ಉದ್ಯೋಗ ಕೊಡಿಸಲು ಕಾನೂನಾತ್ಮಕ ತೊಡಕು ಇತ್ತು. ಕಾನೂನು ಅಭಿಪ್ರಾಯ ಪಡೆದುಕೊಂಡು ಆರು ತಿಂಗಳೊಳಗೆ ಅವರ ಉದ್ಯೋಗ ಖಾಯಂಗೊಳಿಸಲು ಚಿಂತನೆ ಮಾಡಲಾಗಿತ್ತು. ಆದರೆ, ಅಷ್ಟರೊಳಗೆ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರ ಕಳೆದುಕೊಂಡಿತು ಎಂದು ಹೇಳಿದರು.
ಚುನಾವಣಾ ಪೂರ್ವದಲ್ಲಿ ಅಧಿಕಾರಕ್ಕೇರಿದ ತಕ್ಷಣ ಐದು ಉಚಿತ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿರುವ ಕಾಂಗ್ರೆಸ್ 20 ದಿನಗಳಾದರೂ ಇನ್ನೂ ಯಾವುದೇ ಯೋಜನೆಯನ್ನು ಜಾರಿಗೊಳಿಸಿಲ್ಲ. ಆದ್ದರಿಂದ ಅವರ ಕ್ಯಾಬಿನೆಟ್ ರಚನೆಯಾಗಿ ಒಂದು ತಿಂಗಳು ಅಂದರೆ ಜುಲೈನಲ್ಲಿ ಈ ಬಗ್ಗೆ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಪೂರ್ಣ ಬಹುಮತ ಪಡೆದಿರುವ ಕಾಂಗ್ರೆಸ್ ನಾಯಕರು ಅಧಿಕಾರ ಹಂಚಿಕೆಯ ಚರ್ಚೆಯಲ್ಲಿದ್ದಾರೆ. ಇತ್ತ ಸರ್ಕಾರಿ ನೌಕರರು ಏಟು ತಿನ್ನುವ ಪರಿಸ್ಥಿತಿಗೆ ಬಂದಿದ್ದಾರೆ. ವಿದ್ಯುತ್ ಬಿಲ್ ಕಲೆಕ್ಟ್ ಮಾಡಲು ಹೋದವರಿಗೆ ಏಟು ಬೀಳುತ್ತಿದೆ. ಕಾಂಗ್ರೆಸ್ ವಿಜಯೋತ್ಸವದಲ್ಲೇ ಗಲಭೆ ಮಾಡಿದೆ. ದ್ವೇಷದ ರಾಜಕಾರಣವನ್ನು ಮಾಡುತ್ತಿರುವ ಕಾಂಗ್ರೆಸ್ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ ಎಫ್ಐಆರ್ ಹಾಕಿದೆ. ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್ ಹಾಕಲಾಗಿದೆ. ಕಾಂಗ್ರೆಸ್ ದ್ವೇಷ ಸಾಧನೆ ಮೂಲಕ ಬಿಜೆಪಿಯನ್ನು ಕಟ್ಟಿಹಾಕಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರನ್ನು ಬಿಟ್ಟು ಹಲ್ಲೆ ಹತ್ಯೆ ನಡೆಸುತ್ತಿದೆ. ಕಾಂಗ್ರೆಸ್ಗೆ ತಾಕತ್ ಇದ್ರೆ ಪಾಕ್ ಪರ ಜೈಕಾರ ಕೂಗಿದವರನ್ನು ಬಂಧಿಸಲಿ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಈ ಹಿಂದೆ ಮೂರು ಬಾರಿ ಆರ್ಎಸ್ಎಸ್ ಅನ್ನು ಬ್ಯಾನ್ ಮಾಡಿತ್ತು. ಆದರೆ ಕೋರ್ಟ್ ಆರ್ಎಸ್ಎಸ್ ಒಂದು ದೇಶಭಕ್ತ ಸಂಘಟನೆ ಎಂದು ಹೇಳಿತ್ತು. ಪ್ರಧಾನಿ ಮೋದಿ, ನನ್ನನ್ನೂ ಸೇರಿಸಿ ಬಹುತೇಕರು ಎಲ್ಲರೂ ಸಂಘದವರೇ ಆಗಿದ್ದಾರೆ. ಪುತ್ತೂರಿನ ಬಗ್ಗೆ ಅವಲೋಕನ ಸಭೆ ನಡೀತಿದೆ. ಅರುಣ್ ಪುತ್ತಿಲರ ಬಗ್ಗೆ ಅಪಾರ ಗೌರವವಿದೆ. ಪ್ರಜಾಪ್ರಭುತ್ವದಲ್ಲಿ ಯಾರೂ ಚುನಾವಣೆಗೆ ನಿಲ್ಲಬಹುದು. ಸಂಘದ ಮತ್ತು ಪಕ್ಷದ ಒಳಗಿನ ಎಲ್ಲವನ್ನೂ ಸರಿ ಮಾಡುತ್ತೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಒಂಬತ್ತು ವರ್ಷದ ಮೋದಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಡಿವೈನ್ ಸ್ಟಾರ್.. ವಿಡಿಯೋ ನೋಡಿ