ಉಳ್ಳಾಲ :ಉಳ್ಳಾಲ ನಗರಸಭೆಯನ್ನು ರಾಜ್ಯದಲ್ಲೇ ಮಾದರಿ ನಗರಸಭೆಯಾಗಿ ರೂಪಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ. ಸುಮಾರು 61 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ ₹57 ಕೋಟಿ ಕಾಮಗಾರಿ ಪ್ರಗತಿಯಲ್ಲಿದೆ. ನಾಲ್ಕು ಕೋಟಿ ರೂ. ಬಿಡುಗಡೆಯಾಗಲಿದೆ ಎಂದು ಶಾಸಕ ಯು ಟಿ ಖಾದರ್ ತಿಳಿಸಿದರು.
ನಗರಸಭೆ ಅಭಿವೃದ್ಧಿ ಕುರಿತಂತೆ ಶಾಸಕ ಯು ಟಿ ಖಾದರ್ ಮಾಹಿತಿ.. ತೊಕ್ಕೊಟ್ಟು ಕ್ಲಿಕ್ ಹಾಲ್‍ನಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಉಳ್ಳಾಲ ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಆಡಳಿತದಲ್ಲಿರಲಿಲ್ಲ. ಇದೀಗ ನೂತನ ಅಧ್ಯಕ್ಷ- ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ.
ನೂತನ ಆಡಳಿತದಲ್ಲಿ ಉಳ್ಳಾಲ ನಗರಸಭೆಯನ್ನು ಮಾದರಿ ನಗರಸಭೆಯಾಗಿ ರೂಪಿಸಲು ಜನಪ್ರತಿನಿಧಿಗಳು, ಅಧಿಕಾರಿಗಳನ್ನೊಳಗೊಂಡ ತಂಡ ಸಿದ್ಧವಾಗಿದೆ. ಈಗಾಗಲೇ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಉಳ್ಳಾಲದಲ್ಲಿ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ನಿಗಮದಿಂದ 3.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ನಗರಾಭಿವೃದ್ಧಿ ಯೋಜನೆಯಿಂದ 25 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.
ಪ್ರಮುಖ ರಸ್ತೆಗಳ ಅಭಿವೃದ್ಧಿ ನಡೆಯುತ್ತಿದ್ದು ಶೇ.75 ಕಾಮಗಾರಿ ಪೂರ್ಣಗೊಂಡಿದೆ. ಉಳ್ಳಾಲ ರಾಜಮಾರ್ಗ ಅಭಿವೃದ್ಧಿ ಅಬ್ಬಕ್ಕ ಸರ್ಕಲ್ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. ಚತುಷ್ಫಥ ರಸ್ತೆ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರಿನ ಯೋಜನೆಯ ನಿಟ್ಟಿನಲ್ಲಿ ಭವಿಷ್ಯದ 30 ವರ್ಷಗಳ ಕಾಲ ಕುಡಿಯುವ ನೀರು ನಿರಂತರವಾಗಿ ನೀಡುವ ನಿಟ್ಟಿನಲ್ಲಿ ಟ್ಯಾಂಕ್ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಚೆಂಬುಗುಡ್ಡೆಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗುವುದು ಎಂದರು.
ಉಳ್ಳಾಲ ತಾಲೂಕು ರಚನೆಗೆ ನೋಟಿಫಿಕೇಷನ್ ಆಗಿದೆ. ಹಣಕಾಸು ಇಲಾಖೆಗೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದಾದ್ಯಂತ ರಸ್ತೆ, ಕುಡಿಯುವ ನೀರು, ಒಳಚರಂಡಿಯನ್ನು ಸಮರ್ಪಕವಾಗಿ ರೂಪಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಈ ವೇಳೆ ಕಾಂಗ್ರೆಸ್ ಮುಖಂಡ ಈಶ್ವರ ಉಳ್ಳಾಲ್, ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷ ಅಯ್ಯುಬ್ ಮಂಚಿಲ, ಸದಸ್ಯರಾದ ಬಾಝಿಲ್ ಡಿ.ಸೋಜ ಮತ್ತಿತರರು ಉಪಸ್ಥಿತರಿದ್ದರು.