ಮಂಗಳೂರು: ಈ ಹಿಂದೆ ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಇದೀಗ ಮತ್ತೆ ಮೋದಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ನಿರ್ಮೂಲನೆ ಆಗಬೇಕಾದವರೆ ಮೋದಿಯವರು ಪ್ರಬಲ ಶಕ್ತಿಯಾಗಿ ಬೆಳೆಯಬೇಕು. ಅವರ ಆಡಳಿತ ಬಹಳ ಚೆನ್ನಾಗಿದೆ ಎಂದು ಮೋದಿಯವರ ಸಾಧನೆಯನ್ನು ಹಾಡಿ ಹೊಗಳಿದ್ದಾರೆ.
ಸುದ್ದಿಗೋಷ್ಠಿ ಮಾತನಾಡುತ್ತಿರುವ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಇನ್ನು ಬರುವ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಪೂಜಾರಿ, ನಾನು ಕೂಡ ಟಿಕೆಟ್ ಆಕಾಂಕ್ಷಿ. ಇನ್ನೆರಡು ದಿನದಲ್ಲಿ ದೆಹಲಿಗೆ ಹೋಗಬೇಕೆಂದುಕೊಂಡಿದ್ದೇನೆ. ಟಿಕೆಟ್ ಸಿಕ್ಕರೆ ಸ್ಪರ್ಧಿಸುವುದು ಖಂಡಿತ. ಇದು ನನ್ನ ದೃಢ ನಿರ್ಧಾರ. ಎರಡು ದಿನದಲ್ಲಿ ದೆಹಲಿಗೆ ಹೋಗಿ ಸೋನಿಯಾ, ರಾಹುಲ್ ಗಾಂಧಿ, ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲಿದ್ದೇನೆ ಎಂದರು.
ಟಿಕೆಟ್ ಕೊಡದಿದ್ದರೆ ಬಂಡಾಯ!
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಲು ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಅವರ ಹೆಸರು ಕೇಳಿ ಬರುತ್ತಿದೆ. ರಾಜೇಂದ್ರ ಕುಮಾರ್ ಮೇಲೆ ಭ್ರಷ್ಟಾಚಾರ ಆರೋಪ ಇದೆ. ಅವರಿಗೆ ಟಿಕೆಟ್ ಕೊಟ್ಟರೆ ಅವರ ವಿರುದ್ಧ ಬಂಡಾಯ ಏಳುವೆ. ಕಳೆದ ಬಾರಿ ಸಿದ್ದರಾಮಯ್ಯ ಅವರು ಮಂಗಳೂರಿಗೆ ಬಂದಾಗ ಕುದ್ರೋಳಿ ದೇವಸ್ಥಾನಕ್ಕೆ ಬಾರದಂತೆ ತಡೆದ ಐವನ್ ಡಿಸೋಜ ಅವರಿಗೆ ಟಿಕೆಟ್ ಸಿಕ್ಕರೆ ಅವರ ವಿರುದ್ಧವು ಬಂಡಾಯವಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.ಇನ್ನು ರಮಾನಾಥ ರೈ, ವಿನಯಕುಮಾರ್ ಸೊರಕೆ, ಬಿ.ಕೆ.ಹರಿಪ್ರಸಾದ್ ಅವರಿಗೆ ಟಿಕೆಟ್ ಸಿಕ್ಕರೆ ಬೆಂಬಲಿಸುವುದಾಗಿ ಹೇಳಿದರು.