ಕಡಬ (ದಕ್ಷಿಣ ಕನ್ನಡ):ಒಕ್ಕಲಿಗ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವುದೇ ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಮುಳುವಾಯಿತು ಎಂದು ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ ನೆನಪಿಸಿಕೊಂಡಿದ್ದಾರೆ. ಕಡಬದ ಹೊಸ್ಮಠ ಎಂಬಲ್ಲಿ ಮಂಗಳವಾರ ನಡೆದ ಒಕ್ಕಲಿಗ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ತೋಡಿಕೊಂಡರು.
'ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ಒಕ್ಕಲಿಗ ಮುಖಂಡರು ಹಾಗೂ ನಾನು ಸೇರಿಕೊಂಡು ಭೈರವೈಕ್ಯ ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ದೊಡ್ಡ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದೆವು. ಅಲ್ಲಿ ನಾನು ಒಕ್ಕಲಿಗ ಸಮಾಜದಲ್ಲಿ ಹುಟ್ಟಿ, ಆದಿಚುಂಚನಗಿರಿ ಸ್ವಾಮೀಜಿಯವರ ಆಶೀರ್ವಾದ ಪಡೆದು ರಾಜ್ಯದ ಮುಖ್ಯಮಂತ್ರಿಯಾದೆ ಎಂದು ಹೇಳಿಕೆ ನೀಡಿದ್ದೇ. ಇದು ನನ್ನ ಮುಖ್ಯಮಂತ್ರಿ ಸ್ಥಾನಕ್ಕೇ ಮುಳುವಾಯಿತು. ಹಿರಿಯರು ನನಗೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಯಪ್ಪಾ ಎಂದು ಹೇಳಿದರು' ಎಂದು ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ಧ ಬೇಸರ ಹೊರಹಾಕಿದರು.
'ನಾನು ಚುನಾವಣೆ ರಾಜಕೀಯದಿಂದಲೂ ನಿವೃತ್ತಿಯಾಗುತ್ತಿದ್ದೇನೆ. ಇನ್ನು ಮುಂದೆ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ. ಆದರೆ, ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯನಾಗಿರುತ್ತೇನೆ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಇಂದು ರಾಜ್ಯದಲ್ಲಿ ಪ್ರಾಮಾಣಿಕ ರಾಜಕಾರಣಕ್ಕೆ ಬೆಲೆಯೇ ಇಲ್ಲ. ಹರಕು ನಾಲಿಗೆ, ಚೀಲದ ತುಂಬಾ ದುಡ್ಡು ಹಾಗೂ ಗುಂಪುಗಾರಿಕೆಯಿಂದಲೇ ಪ್ರಸ್ತುತ ರಾಜಕೀಯ ನಡೆಯುತ್ತಿದೆ. ಆದರೆ, ಪ್ರಜಾಪ್ರಭುತ್ವದಲ್ಲಿ ರಾಜಕಾರಣ ಬೇಕೇ ಬೇಕು. ಉಳಿದ ಪಕ್ಷಗಳಿಗಿಂತ ನನ್ನ ಪಕ್ಷ ಒಳ್ಳೆಯದು ಎನ್ನುವ ನೆಲೆಯಲ್ಲಿ ಬಿಜೆಪಿ ಜೊತೆಗೆ ಕೆಲಸ ಮಾಡುತ್ತೇನೆ' ಎಂದು ಸದಾನಂದಗೌಡ ತಿಳಿಸಿದರು.