ಮಂಗಳೂರು:ಹೆಚ್ ಡಿ ದೇವೇಗೌಡರಿಗೆ ತುಮಕೂರು ಕ್ಷೇತ್ರ ಬಿಟ್ಟುಕೊಡಲು ಮುದ್ದಹನುಮೇಗೌಡರು ಕೋಟಿಗಟ್ಟಲೇ ಹಣ ಪಡೆದಿದ್ದಾರೆ ಎಂದು ಅಪರಿಚಿತರಿಬ್ಬರು ಮಾತನಾಡಿರುವ ಆಡಿಯೋ ವೈರಲ್ ಆಗಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ಈ ಆರೋಪಕ್ಕೆ ಸಂಸದ ಮುದ್ದಹನುಮೇಗೌಡರು ಇಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೈತ್ರಿ ಪಕ್ಷದ ನಿರ್ಧಾರದಂತೆ ಈ ಹಿಂದೆ ತುಮಕೂರು ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾಗಿ ಹೇಳಿದ್ದಾರೆ.
ಈ ಸಲದ ಮತದಾನ ಪ್ರಕ್ರಿಯೆಯಲ್ಲಿ ಸ್ಪರ್ಧಿಸುವೆನೆಂದು ನಾಮಿನೇಷನ್ ಕೂಡಾ ಹಾಕಿದ್ದೆ. ಬಳಿಕ ನಮ್ಮ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇವರೆಲ್ಲರೂ ನನ್ನ ಮನವೊಲಿಸಿದ್ದರು. ಮೈತ್ರಿಯ ಅನಿವಾರ್ಯತೆಯಿಂದ, ರಾಷ್ಟ್ರದ ಹಿತ, ರಾಜ್ಯದ ಹಿತದಿಂದ ಹಾಗೂ ರಾಷ್ಟ್ರ ರಾಜಕಾರಣದ ಹಿತದೃಷ್ಟಿಯಿಂದ ಬಿಡಬೇಕೆಂದು ಹೇಳಿದ್ದರು. ಬಳಿಕ ನಾನು ಕಣದಿಂದ ಹಿಂದೆ ಸರಿದೆ. ಅಲ್ಲದೆ, ಮೈತ್ರಿ ಪಕ್ಷದ ಅಭ್ಯರ್ಥಿ ದೇವೇಗೌಡರ ಪರ ಪ್ರಚಾರದಲ್ಲೂ ಭಾಗಿಯಾಗಿದ್ದೆ ಎಂದರು.
ಚುನಾವಣಾ ಪ್ರಕ್ರಿಯೆ ಮುಗಿದ ಕೂಡಲೇ ಏಕಾಏಕಿ ನಾನು ನಾಮಪತ್ರ ಹಿಂಪಡೆಯಲು ಕೋಟಿ ಕೋಟಿ ಹಣ ಪಡೆದಿದ್ದೇನೆ ಎಂದು ಅಪರಿಚಿತರಿಬ್ಬರ ಆಡಿಯೋ ಸಂಭಾಷಣೆ ವೈರಲ್ ಆಗಿತ್ತು. ಇದು ನನ್ನ ರಾಜಕೀಯ ಬೆಳವಣಿಗೆಯನ್ನು ಸಹಿಸದ, ರಾಜಕೀಯವಾಗಿ ಕೇಡನ್ನುಂಟು ಮಾಡುವ ವಿಕೃತ ಮನಸ್ಥಿತಿ ಇರುವಂತಹ ವ್ಯಕ್ತಿಗಳು ಈ ಕೃತ್ಯವನ್ನು ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಘಟನೆ ಕುರಿತು ಎಸ್ ಪಿ ಮುದ್ದಹನುಮೇಗೌಡರಿಗೆ ಯಾವುದೇ ಹಣ ನೀಡಿಲ್ಲ ಎಂಬ ಸಮರ್ಥನೆ ಜೆಡಿಎಸ್ ಕಡೆಯಿಂದ ಬರಬೇಕಿತ್ತು. ಆದರೆ ಯಾವುದೇ ಸಮರ್ಥನೆ ಆ ಕಡೆಯಿಂದ ಬರದ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರಕ್ಕೆ ಬಂದಿದ್ದೇನೆ. ಜೆಡಿಎಸ್ ಕಡೆಯುವರಿಂದ ಒಂದು ಪೈಸೆಯನ್ನು ಸಹ ಪಡೆದಿಲ್ಲವೆಂದು ಸ್ಪಷ್ಟಪಡಿಸಿದರು.