ಮಂಗಳೂರು:ಶ್ರೀಕ್ಷೇತ್ರ ಕಟೀಲಿನ ಪಕ್ಕದ ಸಿತ್ಲಬೈಲು ಕೊಂಡೆಮೂಲ ಗ್ರಾಮದಲ್ಲಿಮಳೆಗೆ ಮನೆಯೊಂದರ ಸುತ್ತಲೂ ನೀರು ನಿಂತು ಮನೆ ಸಂಪೂರ್ಣ ಜಲ ದಿಗ್ಬಂಧನಕ್ಕೊಳಗಾಗಿದೆ.
ಮನೆಗೆ ಜಲ ದಿಗ್ಬಂಧನ: ಕಟೀಲಿನ ಈ ಕುಟುಂಬಕ್ಕೆ ಸಂಕಷ್ಟ - ಮಂಗಳೂರು ಮಳೆ ಲೇಟೆಸ್ಟ್ ನ್ಯೂಸ್
ಶ್ರೀಕ್ಷೇತ್ರ ಕಟೀಲಿನ ಪಕ್ಕದ ಸಿತ್ಲಬೈಲು ಕೊಂಡೆಮೂಲ ಗ್ರಾಮದಲ್ಲಿ ಮಳೆಗೆ ಮನೆಯೊಂದರ ಸುತ್ತಲೂ ನೀರು ನಿಂತು ದ್ವೀಪದಂತಾಗಿದೆ. ಮನೆ ಸಂಪೂರ್ಣ ಜಲ ದಿಗ್ಬಂಧನಕ್ಕೊಳಗಾಗಿದ್ದು ಮನೆ ಮಂದಿ ಕಣ್ಣೀರು ಹಾಕುತ್ತಿದ್ದಾರೆ.

ಕೊಂಡೆಮೂಲ ಗ್ರಾಮದ ಕೆ. ರಾಮ ಶೆಟ್ಟಿಗಾರ್ ಎಂಬುವರಿಗೆ ಸೇರಿದ ಮನೆಯಲ್ಲಿ ಈ ರೀತಿಯ ಅವಾಂತರ ಸೃಷ್ಟಿಯಾಗಿದೆ. ಶ್ರೀಕ್ಷೇತ್ರ ಕಟೀಲಿನಲ್ಲಿ ಫೆಬ್ರವರಿಯಲ್ಲಿ ನಡೆದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಅಡುಗೆ ವ್ಯವಸ್ಥೆಗೆಂದು ತಾತ್ಕಾಲಿಕವಾಗಿ ಮಣ್ಣುಹಾಕಿ ಎತ್ತರ ಮಾಡಿರುವ ಪರಿಣಾಮ ಅಲ್ಲೇ ಪಕ್ಕದಲ್ಲಿದ್ದ ಕೆ. ರಾಮ ಶೆಟ್ಟಿಗಾರ್ ಅವರ ಮನೆ ಗುಂಡಿಯೊಳಗೆ ಬಿದ್ದಂತಾಗಿದೆ. ಸುತ್ತಲೂ ಹರಿಯುವ ನೀರಿಗೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ನೇರವಾಗಿ ಹರಿದು ಬಂದು ಮನೆಯ ಕಂಪೌಂಡ್ ನೊಳಗೆ ಶೇಖರಣೆಗೊಳ್ಳುತ್ತಿದೆ. ಪರಿಣಾಮ ಇದೀಗ ಮನೆಯ ಸುತ್ತಲೂ ನೀರು ನಿಂತು ದ್ವೀಪದಂತಾಗಿದೆ.
ಅತ್ತ ಮನೆಯ ಬಾವಿಯೂ ಕೊಳಚೆ ನೀರಿನಿಂದ ತುಂಬಿ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಇತ್ತ ಶೌಚಾಲಯ ಕೂಡಾ ಬ್ಲಾಕ್ ಆಗಿದೆ. ನೀರು ನುಗ್ಗಿ ಬಂದಿರುವ ವೇಗಕ್ಕೆ ಮನೆಯ ಕಂಪೌಂಡ್ ಕೂಡಾ ಕುಸಿದಿದೆ. ಈ ಬಗ್ಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮುಕ್ತೇಸರ ಸನತ್ ಕುಮಾರ್ ಶೆಟ್ಟಿಯವರಿಗೆ, ದ. ಕ. ಜಿಲ್ಲಾಧಿಕಾರಿಯವರಿಗೆ, ಧಾರ್ಮಿಕ ದತ್ತಿ ಇಲಾಖೆಯ ಎಸಿ, ಕಟೀಲು ಗ್ರಾ. ಪಂ. ಗೆ ಯಾರಿಗೇ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಮನೆಮಂದಿ ಈಟಿವಿ ಭಾರತ ಎದುರು ಅಳಲು ತೋಡಿಕೊಂಡಿದ್ದಾರೆ.