ಉಳ್ಳಾಲ: ಸೋಮೇಶ್ವರ ಬೀಚ್ ಬಳಿಯ ಹೋಂ ಸ್ಟೇ ಸೇರಿದಂತೆ ಉಳ್ಳಾಲ ಠಾಣೆ ವ್ಯಾಪ್ತಿಯ ಎರಡು ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಮೊವಾಝ್ (35) ಬಂಧಿತ ಆರೋಪಿ. ಮೊವಾಝ್ ನಿನ್ನೆ ಸಂಜೆ ಸೋಮೇಶ್ವರ ಬಸ್ಸು ತಂಗುದಾಣದ ಬಳಿಯ ಪ್ರಶಾಂತ್ ಎಂಬುವವರ ಮನೆಯ ಹಿಂಬಾಗಿಲಿನ ಬೀಗ ಒಡೆದು ಮನೆಯಲ್ಲಿದ್ದ 26 ಗ್ರಾಂ ಚಿನ್ನ ಹಾಗೂ 3,000 ರೂಪಾಯಿ ಹಣ ದೋಚಿ ಪರಾರಿಯಾಗಿದ್ದ.
ಅಲ್ಲದೆ ರಾತ್ರಿ ಉಳ್ಳಾಲ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ್ದು, ಗುಡಿಯಲ್ಲಿನ ಹಿತ್ತಾಳೆ ಪರಿಕರಗಳು ಹಾಗೂ ಹುಂಡಿಯ ಬೀಗ ಒಡೆದು ಕಾಣಿಕೆ ಹಣವನ್ನೂ ಕದ್ದಿದ್ದಾನೆ. ಅಲ್ಲದೇ ದೇವಸ್ಥಾನದ ಸಿಬ್ಬಂದಿಯಾದ ಪ್ರಸಾದ್ ಅವರ ಮನೆಯ ಹಿಂಬಾಗಿಲಿನ ಬೀಗ ಒಡದು 56 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದ. ಈ ವೇಳೆ ಸಿಸಿಟಿವಿಯಲ್ಲಿ ಮೊವಾಝ್ನ ಚಹರೆ ಸೆರೆಯಾಗಿತ್ತು.