ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ತ್ಯಾಜ್ಯ ಸಂಗ್ರಹಗಾರರಿಗೆ ನಿರ್ಮಾಣವಾಯಿತು ಪ್ಲಾಸ್ಟಿಕ್​ನಿಂದ ಮನೆ: ರಾಜ್ಯದಲ್ಲಿಯೇ ಪ್ರಥಮ ಪ್ರಯೋಗ

ತಳಪಾಯವನ್ನು ಕಲ್ಲು - ಸಿಮೆಂಟ್​ಗಳಿಂದ ನಿರ್ಮಿಸಲಾಗಿದ್ದು, ಪ್ಲಾಸ್ಟಿಕ್ ಪ್ಯಾನಲ್​ಗಳು ಬಲವಾಗಲು ಕಬ್ಬಿಣದ ರಾಡ್​ಗಳನ್ನು ವೆಲ್ಡ್ ಮಾಡಿ ಫಿಕ್ಸ್ ಮಾಡಲಾಗಿದೆ. ಮೇಲ್ಛಾವಣಿಗೂ ಪ್ಲಾಸ್ಟಿಕ್ ಶೀಟ್​ಗಳನ್ನೇ ಬಳಸಲಾಗಿದೆ. ಕೇವಲ ಹತ್ತು ದಿನಗಳಲ್ಲಿ ಈ ಮನೆಯನ್ನು ನಿರ್ಮಿಸಬಹುದಾಗಿದೆ.

By

Published : Nov 10, 2020, 10:45 PM IST

plastic house
plastic house

ಮಂಗಳೂರು: ಇಂದಿನ ಕಾಲಘಟ್ಟದಲ್ಲಿ ಪ್ಲಾಸ್ಟಿಕ್ ಪೆಡಂಭೂತವಾಗಿ ಪರಿಸರವನ್ನು ಕಾಡುತ್ತಿದೆ.‌ ತ್ಯಾಜ್ಯವಾದ ಪ್ಲಾಸ್ಟಿಕ್​ನ ಸಮರ್ಥ ನಿರ್ವಹಣೆಯೇ ಬಹುದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಮೂಲದ 'ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಷನ್' ಎಂಬ ಸಂಸ್ಥೆ ಮರುಬಳಕೆಯಾಗಲೂ ಯೋಗ್ಯವಲ್ಲದ ಪ್ಲಾಸ್ಟಿಕ್​ನಿಂದಲೇ ತ್ಯಾಜ್ಯ ಸಂಗ್ರಹಕಾರರಿಗೆಂದೇ ಸುಂದರವಾದ ಮನೆ ನಿರ್ಮಾಣ ಮಾಡಿದೆ.

ತ್ಯಾಜ್ಯ ಸಂಗ್ರಹಗಾರರೂ ಕೂಡಾ ಸಂಗ್ರಹಣೆ ಮಾಡದ ಪಾನ್ ಪರಾಗ್, ಲೇಸ್ ಮತ್ತಿತರ ಮರುಬಳಕೆಗೆ ಸಾಧ್ಯವೇ ಆಗದ ಎಲ್​ಡಿಪಿ(ಲೋ ಡೆನ್ಸಿಟಿ ಪ್ಲಾಸ್ಟಿಕ್) ಹಾಗೂ ಎಂಎಲ್​ಪಿ(ಮಲ್ಟಿ ಲೇಯರ್ಡ್ ಪ್ಲಾಸ್ಟಿಕ್) ಪ್ಲಾಸ್ಟಿಕ್ ಬಳಸಿ ಈ ಪ್ಲಾಸ್ಟಿಕ್ ಮನೆಯನ್ನು ನಿರ್ಮಾಣ ಮಾಡಲಾಗಿದೆ‌. ಮಣ್ಣು, ಸಮುದ್ರಗಳಿಗೆ ಮಾರಕವಾಗಿರುವ ಈ ಪ್ಲಾಸ್ಟಿಕ್​ಗಳನ್ನೇ ಸಂಗ್ರಹಿಸಿ ಅದನ್ನು ಕರಗಿಸಿ ಪ್ಯಾನೆಲ್(ಶೀಟ್)ಗಳನ್ನಾಗಿ ಮಾಡಿ ಮನೆಯನ್ನು ನಿರ್ಮಿಸಲಾಗಿದೆ. ಪ್ರತೀ ಪ್ಯಾನಲ್​ಗೆ ಸುಮಾರು 25 ಕೆಜಿಯಷ್ಟು ಎಲ್​ಡಿಪಿಇ ಹಾಗೂ ಎಂಎಲ್​ಪಿ ಪ್ಲಾಸ್ಟಿಕ್ ಬಳಸಲಾಗಿದೆ. ಸುಮಾರು 360 ಚದರ ಅಡಿಯ ಈ ಒಂದು ಮನೆಗೆ ಸುಮಾರು 1500 ಕೆಜಿ ಪ್ಲಾಸ್ಟಿಕ್ ಬಳಸಲಾಗಿದೆ. ಒಂದು ಹಾಲ್, ಸಣ್ಣ ಅಡುಗೆ ಕೋಣೆ, ದೇವರ ಕೋಣೆ ಸೇರಿದಂತೆ ಬಾತ್ ರೂಂ ಇರುವ ಈ ಮನೆಯು ಸುಮಾರು 4.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ.

ಪ್ಲಾಸ್ಟಿಕ್​ನಿಂದ ಮನೆ ನಿರ್ಮಾಣ

ತಳಪಾಯವನ್ನು ಕಲ್ಲು - ಸಿಮೆಂಟ್​ಗಳಿಂದ ನಿರ್ಮಿಸಲಾಗಿದ್ದು, ಪ್ಲಾಸ್ಟಿಕ್ ಪ್ಯಾನಲ್​ಗಳು ಬಲವಾಗಲು ಕಬ್ಬಿಣದ ರಾಡ್​ಗಳನ್ನು ವೆಲ್ಡ್ ಮಾಡಿ ಫಿಕ್ಸ್ ಮಾಡಲಾಗಿದೆ. ಮೇಲ್ಛಾವಣಿಗೂ ಪ್ಲಾಸ್ಟಿಕ್ ಶೀಟ್​ಗಳನ್ನೇ ಬಳಸಲಾಗಿದೆ. ಕೇವಲ ಹತ್ತು ದಿನಗಳಲ್ಲಿ ಈ ಮನೆಯನ್ನು ನಿರ್ಮಿಸಬಹುದಾಗಿದೆ.

ಸುಮಾರು 30 ವರ್ಷಗಳ ಕಾಲ ಬಾಳಿಕೆ ಬರುವ ಈ ಮನೆಯನ್ನು ಈಗಾಗಲೇ ತಪಾಸಣೆ ಮಾಡಿದ್ದು, ಬೆಂಕಿಯಿಂದಾಗಲಿ, ಹವಾಗುಣದಿಂದಾಗಲಿ ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ ಎಂಬ ವರದಿ ಬಂದಿದೆ. ಕಾಂಕ್ರೀಟ್ ಶೀಟ್​ಗಿಂತಲೂ ಗಟ್ಟಿಯಾಗಿರುವ ಈ ಪ್ಲಾಸ್ಟಿಕ್ ಮನೆಗೆ 120 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದಾಗಲೂ ತಡೆದುಕೊಳ್ಳುವ ಶಕ್ತಿ ಇದೆ. ಪ್ಲಾಸ್ಟಿಕ್ ಪ್ಯಾನಲನ್ನು 8ಎಂಎಂ ನಿಂದ 20 ಎಂಎಂ ವರೆಗೆ ತಯಾರಿಸಲಾಗುತ್ತದೆ. ಮನೆಯ ವಿಸ್ತೀರ್ಣದ ಮೇಲೆ ವಿವಿಧ ಎಂಎಂ ನ ಪ್ಲಾಸ್ಟಿಕ್ ಪ್ಯಾನಲ್ ಬಳಸಲಾಗುತ್ತದೆ.

'ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಷನ್' ಎಂಬ ಸಂಸ್ಥೆ ರಾಜ್ಯದಲ್ಲಿಯೇ ಪ್ರಥಮ ಪ್ರಯೋಗವೆಂಬಂತೆ ಮೊದಲ ಬಾರಿಗೆ ಮಂಗಳೂರಿನ ಪಚ್ಚನಾಡಿಯಲ್ಲಿನ ತ್ಯಾಜ್ಯ ಸಂಗ್ರಹಗಾರರಿಗೆಂದು ಪ್ಲಾಸ್ಟಿಕ್ ತ್ಯಾಜ್ಯದಿಂದಲೇ ಈ ಪ್ಲಾಸ್ಟಿಕ್ ಮನೆಯನ್ನು ನಿರ್ಮಿಸಿದೆ. ಇದೀಗ ಪೌರ ಕಾರ್ಮಿಕೆ ಕಮಲಾ ಎಂಬವರಿಗೆ‌ ಪ್ಲಾಸ್ಟಿಕ್ ಮನೆಯನ್ನು ನಿರ್ಮಾಣ ಮಾಡಲಾಗಿದ್ದು, ಮುಂದಿನ ಜನವರಿಯಿಂದ ಆಗಸ್ಟ್​ ವರೆಗಿನ ಅವಧಿಯಲ್ಲಿ ಇಲ್ಲಿನ ಸ್ವಂತ ಸೂರಿಲ್ಲದೆ ಜೋಪಡಿಯಲ್ಲಿರುವ ಸುಮಾರು 20ರಷ್ಟು ತ್ಯಾಜ್ಯ ಸಂಗ್ರಾಹಕ ಕುಟುಂಬಗಳಿಗೆ ಮನೆಯನ್ನು ಕಟ್ಟಿಕೊಡುವ ಯೋಜನೆ ಇದೆಯಂತೆ.

ಮಿತ ಶ್ರಮ, ಕಡಿಮೆ ವೆಚ್ಚ ಹಾಗೂ ಅಧಿಕ ಕಾಲ ಬಾಳಿಕೆ ಬರುವ ಪ್ಲಾಸ್ಟಿಕ್​ನಿಂದ ನಿರ್ಮಾಣವಾದ ಈ ಮನೆಯನ್ನು ಕಂಡವರು ಬಹಳ ಮಂದಿ ಮೆಚ್ಚಿಕೊಂಡಿದ್ದು, ತಾವೂ ಯಾಕೆ ಈ ರೀತಿಯ ಮನೆ ನಿರ್ಮಾಣ ಮಾಡಬಾರದು ಅಂದು ಕೊಂಡಿದ್ದಾರಂತೆ. ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿರುವ ಪೊಲೀಸರು ಮನೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ, ಪೊಲೀಸ್ ಚೌಕಿ ಮಾಡಲು ಸೂಕ್ತವೆಂದು ಹೇಳಿದ್ದಾರಂತೆ.

ಈ ಬಗ್ಗೆ 'ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಷನ್' ನಿರ್ದೇಶಕ ಚಂದನ್ ಎಂ.ಸಿ. ಮಾತನಾಡಿ, ತ್ಯಾಜ್ಯ ಸಂಗ್ರಹಗಾರರಿಂದ ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ನಮ್ಮ ನಿರ್ಮಾಣ ಪಾಲುದಾರ ಸಂಸ್ಥೆ ಹೈದರಾಬಾದ್ ನ ಬಂಬೂ ಹೌಸ್ ಮೂಲಕ ಗುಜರಾತ್ ಗೆ ಕಳುಹಿಸಲಾಗುತ್ತದೆ. ಅಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕರಗಿಸಿ ಪ್ಯಾನಲ್ (ಶೀಟ್ ) ರೀತಿ ಪರಿವರ್ತನೆ ಮಾಡಲಾಗುತ್ತದೆ. ಬಳಿಕ‌ ಆ ಪ್ಯಾನಲ್​ಗಳನ್ನು ಇಲ್ಲಿಗೆ ತಂದು ಮನೆ ನಿರ್ಮಾಣ ಮಾಡುತ್ತೇವೆ. ಮರು ಬಳಕೆಯಾದ ಪ್ಲಾಸ್ಟಿಕ್​ನಿಂದ ಈ ಪ್ಯಾನೆಲನ್ನು ತಯಾರಿಸಿದರೂ, ರಾಸಾಯನಿಕವನ್ನು ಬಳಸಿರುವುದರಿಂದ ಪ್ಲಾಸ್ಟಿಕ್ ವಾಸನೆ ಬರುವುದಿಲ್ಲ ಎಂದು ಹೇಳಿದರು.‘

ಮನೆಯ ಫಲಾನುಭವಿ ಕಮಲಾ ಅವರು ಮಾತನಾಡಿ, ಸುಮಾರು ಎರಡು ಸಲ ನನ್ನ ಮನೆಯು ಕುಸಿದು ಬಿದ್ದಿತ್ತು. ಬೀದಿ ಪಾಲಾಗಿದ್ದ ನನಗೆ 'ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಷನ್'ನವರು ಪ್ಲಾಸ್ಟಿಕ್​ನಿಂದಲೇ ಸುಂದರವಾದ ಮನೆಯನ್ನು ಉಚಿತವಾಗಿ ನಿರ್ಮಿಸಿಕೊಟ್ಟಿದ್ದಾರೆ. ಮೊದಲಿಗೆ ಪ್ಲಾಸ್ಟಿಕ್​ನಿಂದ ಯಾವ ರೀತಿ ಮನೆ ನಿರ್ಮಿಸಿಕೊಡುತ್ತಾರೆ ಎಂಬ ಅಳುಕಿತ್ತು. ಆದರೆ ಈ ಮನೆ ಕಲ್ಲು, ಸಿಮೆಂಟ್​ನಿಂದ ನಿರ್ಮಾಣವಾಗುವ ಮನೆಯಷ್ಟೇ ಗಟ್ಟಿಯಾಗಿದೆ ಎಂದು ಹೇಳಿದರು.

ABOUT THE AUTHOR

...view details