ಬಂಟ್ವಾಳ: 20 ವರ್ಷಗಳಿಂದ ಜೇನು ಪೆಟ್ಟಿಗೆ ತಯಾರಿಕೆಯ ಮೂಲಕ ತಾಲೂಕಿನ ಕೇಪು ಗ್ರಾಮದ ಬಡೆಕ್ಕೋಡಿ ಸುಧಾಕರ ಪೂಜಾರಿ ರಾಜ್ಯದ ಗಮನ ಸೆಳೆದಿದ್ದಾರೆ.
ಮಧುವನ ನಿರ್ಮಾಣ ಮಾಡಿದ ಹಳ್ಳಿ ಸಾಧಕ.. ಎರಡು ವರ್ಷಗಳ ಹಿಂದೆ ತಮ್ಮ ಮನೆಯ ಹತ್ತಿರವೇ ಸಣ್ಣಮಟ್ಟದ ಜೇನು ಪೆಟ್ಟಿಗೆ ತಯಾರಿಕಾ ಶೆಡ್ ನಿರ್ಮಿಸಿಕೊಂಡು ಜೇನು ಪೆಟ್ಟಿಗೆಯ ಬೇಡಿಕೆಗೆ ಅನುಗುಣವಾಗಿ ಪೆಟ್ಟಿಗೆ ತಯಾರಿಸಲು ಆರಂಭಿಸಿದರು. ಜೇನು ವ್ಯವಸಾಯ ಸಹಕಾರಿ ಸಂಘ ಹಾಗೂ ಖಾಸಗಿ ಜೇನು ಕೃಷಿಕರ ಬೇಡಿಕೆ ಹೆಚ್ಚುತ್ತ ಹೋದಂತೆ ಸುಧಾಕರ್ ಪೂಜಾರಿ ತನ್ನ ಘಟಕವನ್ನು ವಿಸ್ತರಿಸಿದ್ದಾರೆ.
ಕೇವಲ ಜೇನು ಪೆಟ್ಟಿಗೆಯಲ್ಲದೇ, ಜೇನು ಸಂಸ್ಕರಣಾ ಯಂತ್ರ, ಪೆಟ್ಟಿಗೆ ಸ್ಟ್ಯಾಂಡ್, ಕೃತಕ ಮೇಣದ ಹಾಳೆ, ಮುಖಪರದೆ, ಹೊಗೆತಿದಿ ಹೀಗೆ ಜೇನು ಕೃಷಿಯಲ್ಲಿ ಬಳಸಲ್ಪಡುವ ಪೂರ್ಣ ಪ್ರಮಾಣದ ಪರಿಕರಗಳನ್ನು ತನ್ನ ಘಟಕದಲ್ಲಿಯೇ ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೇನು ಕೃಷಿ ಪ್ರಗತಿಯತ್ತ ಸಾಗಿದ್ದು, ಅವರ ಅಡಿಕೆ ತೋಟ ಹಾಗೂ ಸುತ್ತಮುತ್ತಲು ಸುಮಾರು 400 ಜೇನು ಪೆಟ್ಟಿಗೆಗಳಿವೆ. ಜೇನು ಸಂಗ್ರಹದೊಂದಿಗೆ ಜೇನು ಕುಟುಂಬವನ್ನು ಅಭಿವೃದ್ಧಿ ಪಡಿಸಿ ರೈತರಿಗೆ ಒದಗಿಸುತ್ತಿದ್ದಾರೆ.
ಪತ್ನಿ ಹರಿಣಾಕ್ಷಿ, ಮಕ್ಕಳಾದ ವಿಶ್ರುತ್, ಪ್ರಾಪ್ತಿ ಜೇನು ಕುಟುಂಬ ಪ್ರತ್ಯೇಕಿಸುವ, ರಾಣಿ ಜೇನುನೊಣಗಳ ಅಭಿವೃದ್ಧಿ ಇನ್ನಿತರ ಕೆಲಸಗಳ ಜವಾಬ್ದಾರಿ ಹೊತ್ತಿದ್ದಾರೆ. 2019ರಲ್ಲಿ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆ ಜೇನುಗಾರಿಕೆ ಅಭಿವೃದ್ಧಿ ಯೋಜನೆಯಡಿಯಲ್ಲಿ ಅಧಿಕೃತ ಜೇನು ತಯಾರಿಕಾ ಪೆಟ್ಟಿಗೆ ಉತ್ಪಾದಕರಲ್ಲಿ ಒಬ್ಬರೆಂದು ಗುರುತಿಸಿದ ಬಳಿಕ ಬೇಡಿಕೆ ಹೆಚ್ಚಾಗಿದೆ.