ಕರ್ನಾಟಕ

karnataka

ETV Bharat / state

ಪ್ರಧಾನಿ ಮೋದಿ ತವರಿಗೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಜೇನು ಕುಟುಂಬ

ಪ್ರಧಾನಿ ಮೋದಿಯವರ ಕನಸಿನ ಯೋಜನೆ ಮಧು ಕ್ರಾಂತಿಯನ್ನು ಸಾಕಾರಗೊಳಿಸಲು ದಕ್ಷಿಣಕನ್ನಡ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜೇನು ಕೃಷಿಕ ಮನಮೋಹನ್​ ಆರಂಬ್ಯ ಅಡಿಯಿಟ್ಟಿದ್ದಾರೆ. ಇವರು ಜೇನು ಸಾಕಾಣಿಕೆ ಬಗ್ಗೆ ತರಬೇತಿ ನೀಡಲು ಗುಜರಾತ್​ಗೆ​ ತೆರಳಲಿದ್ದಾರೆ. ಇದರ ಭಾಗವಾಗಿ 100 ಜೇನು ಕುಟುಂಬಗಳನ್ನು ಗುಜರಾತ್​ ಗೆ ರವಾನಿಸಿದ್ದಾರೆ.

honey-comb-sent-to-gujarath-from-dakshina-kannada
ಪ್ರಧಾನಿ ಮೋದಿ ತವರಿಗೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಜೇನು ಕುಟುಂಬ

By

Published : Sep 24, 2022, 8:22 PM IST

ಪುತ್ತೂರು(ದಕ್ಷಿಣಕನ್ನಡ) :ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಮಧು ಕಾಂತ್ರಿಯನ್ನು ನನಸು ಮಾಡಲು ದೇಶದೆಲ್ಲೆಡೆ ಜೇನು ಕೃಷಿಯ ಮೇಲೆ ಒಲವು ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಧಾನಿ ತವರು ಗುಜರಾತ್ ನ ರೈತರು ಜೇನು ಸಾಕಾಣಿಕೆಗೆ ಹೆಚ್ಚಿನ ಒತ್ತು ನೀಡಲು ಆರಂಭಿಸಿದ್ದಾರೆ.

ಗುಜರಾತ್ ರೈತರಿಗೆ ಜೇನು ಸಾಕಾಣಿಕೆಯ ಬಗ್ಗೆ ಹೆಚ್ಚಿನ ತರಬೇತಿ ನೀಡಲು ದಕ್ಷಿಣಕನ್ನಡ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜೇನು ಉತ್ಪಾದಕರೊಬ್ಬರು ಗುಜರಾತ್ ಗೆ ತೆರಳಲಿದ್ದಾರೆ. ಈಗಾಗಲೇ ದಕ್ಷಿಣಕನ್ನಡ ಜಿಲ್ಲೆಯ 100 ಜೇನು ಕುಟುಂಬಗಳನ್ನು ಗುಜರಾತ್ ಗೆ ರವಾನಿಸಿರುವ ಇವರಿಗೆ ಒಟ್ಟು 1 ಸಾವಿರ ಜೇನು ಕುಟುಂಬಗಳನ್ನು ಗುಜರಾತ್ ನಲ್ಲಿ ಬೆಳೆಸುವ ಜವಾಬ್ದಾರಿಯನ್ನು ನೀಡಲಾಗಿದೆ.

ಗುಜರಾತ್​ನ ಕೃಷಿಕರಿಂದ 1000 ಪೆಟ್ಟಿಗೆಗೆ ಬೇಡಿಕೆ : ಹೌದು.. ಜೇನು ಕೃಷಿಯಲ್ಲಿ ತೊಡಗಿರುವ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿಯ ಯುವಕ ಮನಮೋಹನ್ ಆರಂಬ್ಯ ಅವರು ತುಡುವೆ ಜೇನಿನ ಸಿಹಿಯನ್ನು ರಾಷ್ಟ್ರಮಟ್ಟದಲ್ಲಿ ಪಸರಿಸುವಲ್ಲಿ ಹೆಜ್ಜೆ ಇರಿಸಿದ್ದು, ಗುಜರಾತ್‍ನಲ್ಲಿ ಇವರ ಜೇನು ಕೃಷಿಗೆ ಬೇಡಿಕೆ ವ್ಯಕ್ತವಾಗಿದೆ. ಜೇನು ಕೃಷಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕರ್ನಾಟಕ ರಾಜ್ಯದ ಜೇನು ಉತ್ಪಾದನೆಯಲ್ಲಿ ಅಗ್ರ ಸ್ಥಾನದಲ್ಲಿರುವ ಇವರು ರಾಜ್ಯಾದ್ಯಂತ ಜೇನು ಮತ್ತು ಕುಟುಂಬಗಳನ್ನು ಒದಗಿಸಿಕೊಟ್ಟು ಜೇನು ಕೃಷಿಕರಿಗೆ ಪ್ರೇರಣೆಯಾಗಿದ್ದಾರೆ. ಜೇನು ಕೃಷಿಯಲ್ಲಿನ ಇವರ ಸಾಧನೆ ಮತ್ತು ಯಶಸ್ಸು ಗುರುತಿಸಿದ ಗುಜರಾತ್ ನ ಕೃಷಿಕರು 1000 ಪೆಟ್ಟಿಗೆಗೆ ಬೇಡಿಕೆ ಇಟ್ಟಿದ್ದಾರೆ.

ಪ್ರಧಾನಿಯವರ ಮಧು ಕ್ರಾಂತಿಯ ಕಲ್ಪನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಯೋಗಾತ್ಮಕವಾಗಿ ಮನಮೋಹನ್ ಅವರು ಗುಜರಾತ್‍ಗೆ 100 ಜೇನು ಕುಟುಂಬಗಳನ್ನು ಕಳುಹಿಸಿದ್ದಾರೆ. ಈಗಾಗಲೇ 1000 ಜೇನು ಕುಟುಂಬದ ಪೆಟ್ಟಿಗೆಗೆ ಬೇಡಿಕೆ ಬಂದಿದೆ.

ಚಿಕ್ಕಂದಿನಿಂದಲೇ ಜೇನು ಸಾಕಾಣಿಕೆ : ಮನಮೋಹನ್​ ಅವರು 8ನೇ ತರಗತಿಯಲ್ಲಿ ಇರುವಾಗಲೇ ಜೇನು ಕೃಷಿಯಲ್ಲಿ ತೊಡಗಿದ್ದರು. ಕೇವಲ ಒಂದು ಪೆಟ್ಟಿಗೆಯಿಂದ ಆರಂಭಗೊಂಡ ಕಾಯಕ ನಾಲ್ಕು ಸಾವಿರದ ಗಡಿ ದಾಟಿದೆ. ಒಂದು ಪೆಟ್ಟಿಗೆಯಿಂದ ಗರಿಷ್ಠ 48.6 ಕಿಲೋ ಜೇನು ಸಂಗ್ರಹಿಸಿದ್ದೂ ಇದೆ. ಬೆಟ್ಟಂಪಾಡಿಯಿಂದ ತೊಡಗಿ ರಾಜ್ಯದ ನಾನಾ ಕಡೆಗಳಲ್ಲಿ ಜೇನು ಪೆಟ್ಟಿಗೆ ಇರಿಸಿದ್ದಾರೆ. ಇವರು ಬೇರೆಯವರ ಜಾಗದಲ್ಲಿ,ಜಮೀನಿನಲ್ಲಿ ಜೇನು ಸಾಕಾಣಿಕೆ ಮಾಡುತ್ತಿದ್ದಾರೆ. ಸ್ಥಳ ಬಾಡಿಗೆಯಾಗಿ ಮಾಲೀಕನಿಗೆ ಒಂದಷ್ಟು ಜೇನು ಮತ್ತು ಪರಾಗಸ್ಪರ್ಶದಿಂದ ಫಸಲು ಹೆಚ್ಚಳವಾಗಿದೆ.

ಶುದ್ಧ ಜೇನು ಸಂಗ್ರಹಿಸುವ ಕರ್ನಾಟಕದ ಏಕೈಕ ಕೃಷಿಕ :ವಾರ್ಷಿಕವಾಗಿ 20,000 ಕೆ. ಜಿ. ಜೇನು, 450 ಕೆ.ಜಿ. ಮೇಣ ಸಂಗ್ರಹ, 4000 ಜೇನು ಕುಟುಂಬ ಮಾರಾಟ ಮಾಡಿರುವುದು ಮನಮೋಹನರ ಸಾಧನೆ. 'ಹನಿ ವರ್ಲ್ಡ್' ಇವರ ಬ್ರಾಂಡ್ ಹೆಸರು. ಜೇನು ಕುಟುಂಬ ಮಾರಾಟ ಮಾಡುವ, ಹಾಗೂ ಶುದ್ಧ ಜೇನು ಸಂಗ್ರಹಿಸುವ ಕರ್ನಾಟಕದ ಏಕೈಕ ಯುವ ಕೃಷಿಕ ಎಂಬ ಹೆಗ್ಗಳಿಕೆಗೆ ಮನಮೋಹನ್​ ಅವರು ಪಾತ್ರರಾಗಿದ್ದಾರೆ.

ಸುಮಾರು 20 ಜನರಿಗೆ ಉದ್ಯೋಗ :ಕೇರಳ, ಕರ್ನಾಟಕ ರಾಜ್ಯದ ದಕ್ಷಿಣಕನ್ನಡ, ಕೊಡಗು, ಚಿತ್ರದುರ್ಗ ಹೀಗೆ ನಾನಾ ಕಡೆಗಳಲ್ಲಿ ಮನಮೋಹನ ಅವರ ಜೇನಿನ ಪೆಟ್ಟಿಗೆ ಇದೆ. ಜೇನು ಕೃಷಿಯಲ್ಲೇ ಸುಮಾರು 20 ಜನರಿಗೆ ನೇರ ಉದ್ಯೋಗ ನೀಡುತ್ತಿರುವ ಮನಮೋಹನ್ ಜೇನಿನ ಕೃಷಿಯ ಅಗಾಧ ಅನುಭವವನ್ನು ಜೇನು ಸಾಕಾಣಿಕೆಗಾಗಿ ತಮ್ಮ ಬಳಿ ಬರುವವರಿಗೆ ಧಾರೆ ಎರೆದಿದ್ದಾರೆ.

ಗುಜರಾತಿನಿಂದ 1000 ತುಡುವೆ ಜೇನಿನ ಕುಟುಂಬಕ್ಕೆ ಬೇಡಿಕೆ ವ್ಯಕ್ತವಾಗಿದೆ. 100 ಪೆಟ್ಟಿಗೆ, ಕುಟುಂಬವನ್ನು ಈಗಾಗಲೇ ಒದಗಿಸಿದ್ದೇನೆ. ನಾಲ್ಕು ದಿನದಲ್ಲಿ ಅಲ್ಲಿಗೆ ತೆರಳಿ ಕೃಷಿಗೆ ಸಹಕಾರ ನೀಡಲಿದ್ದೇನೆ. ಈಗಾಗಲೇ ವಾರ್ಷಿಕವಾಗಿ ಜೇನು ಕೃಷಿಯಿಂದ 20 ಟನ್ ಜೇನು ಉತ್ಪಾದನೆ ಆಗುತ್ತಿದೆ ಎನ್ನುತ್ತಾರೆ ಜೇನು ಕೃಷಿಯಲ್ಲಿ ತೊಡಗಿ ಯಶಸ್ಸು ಕಂಡಿರುವ ಮನಮೋಹನ್ ಆರಂಬ್ಯ.

ಇದನ್ನೂ ಓದಿ :ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿಗೆ ನಟ ರಮೇಶ್ ಅರವಿಂದ್​ ಆಯ್ಕೆ

ABOUT THE AUTHOR

...view details