ಕರ್ನಾಟಕ

karnataka

ETV Bharat / state

ಹೆಜ್ಜೇನು ದಾಳಿ.. ಬಾವಿಯಲ್ಲಿ ಅಡಗಿ ಕುಳಿತ 79 ರ ವೃದ್ಧ ಪಾರು : ಇಬ್ಬರಿಗೆ ಗಂಭೀರ ಗಾಯ - Honey bee

ಹೆಜ್ಜೇನು ದಾಳಿಗೆ ಒಂದೇ ಕುಟುಂಬದ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Honey bee attack
ಹೆಜ್ಜೇನು ದಾಳಿ

By

Published : Mar 30, 2023, 7:45 PM IST

ಉಳ್ಳಾಲ (ದಕ್ಷಿಣಕನ್ನಡ) :ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು 79ರ ವೃದ್ಧ ಬಾವಿಗಿಳಿದು ಪಾರಾದರೆ, ಉಳಿದ ಇಬ್ಬರು ಗಂಭೀರ ಹಾಗೂ ಓರ್ವ ಗಾಯಗೊಂಡಿರುವ ಘಟನೆ ನರಿಂಗಾನ ಗ್ರಾಮದ ಬೋಳ ಎಂಬಲ್ಲಿ ನಡೆದಿದೆ. ಉಳ್ಳಾಲ ತಾಲೂಕಿನ ನರಿಂಗಾನ‌ ಗ್ರಾಮದ ಬೋಳ ನಿವಾಸಿ ರಾಬರ್ಟ್ ಕುಟಿನ್ಹ(79) ಬಾವಿಗೆ ಇಳಿದು ಪಾರಾದರೆ, ಅವರ ಪುತ್ರ ರಾಯಲ್ ಕುಟಿನ್ಹ(39) ಹೆಜ್ಜೇನು ದಾಳಿಗೆ ತುತ್ತಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದೇ ಸಂದರ್ಭ ಹೆಜ್ಜೇನು ದಾಳಿಗೆ ನಿಲುಕಿದ ಅಣ್ಣನ ಕೂಗು ಕೇಳಿ ಸ್ಥಳಕ್ಕೆ ಬಂದ ರಾಬರ್ಟ್ ಕುಟಿನ್ಹ ಅವರ ಸಹೋದರ ಜೋಸೆಫ್ ಕುಟಿನ್ಹ ಅವರಿಗೂ ಗಾಯಗಳಾಗಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ. ಘಟನೆಯಲ್ಲಿ ಜೋಸೆಫ್ ಕುಟಿನ್ಹ ಅವರ ಪುತ್ರ ಅಖಿಲ್ ಅವರಿಗೂ ಹೆಜ್ಜೇನು ಕಡಿದಿದ್ದು ಗಾಯಗಳಾಗಿವೆ. ರಾಬರ್ಟ್ ಕುಟಿನ್ಹ ಅವರು ಬೆಳಗ್ಗೆ ಒಣಗಿದ ಬಟ್ಟೆ ತೆಗೆಯಲೆಂದು ಮನೆಯ ಮಹಡಿ ಹತ್ತುವಾಗ ಈ ಘಟನೆ ನಡೆದಿದೆ.

ಹೆಜ್ಜೇನು ದಾಳಿಯಿಂದ ನೋವು ತಡೆಯಲಾರದೆ ಕೂಗಿಕೊಂಡಾಗ ರಕ್ಷಣೆಗೆಂದು ಧಾವಿಸಿದ ಪುತ್ರನಿಗೂ ಹೆಜ್ಜೇನುಗಳು ಕಡಿದಿವೆ. ಮಗನ‌ ಸಹಾಯದಿಂದ ಮಹಡಿಯಿಂದ ಕೆಳಗೆ ಪವಾಡ ಸದೃಶ್ಯವಾಗಿ ಇಳಿದು ಪಾರಾದರೂ ಅವರಿಬ್ಬರ ಕೂಗು ಕೇಳಿದ ಜೋಸೆಫ್ ಕುಟಿನ್ಹ‌ ಹಾಗೂ ಅಖಿಲ್ ರಕ್ಷಣೆಗೆ ಸ್ಥಳಕ್ಕೆ ಧಾವಿಸಿದಾಗ ಅವರಿಗೂ ಹೆಜ್ಜೇನು ಕಡಿದಿವೆ.

ಈ ಘಟನೆಯಲ್ಲಿ ರಾಬರ್ಟ್ ಕುಟಿನ್ಹ ಅವರಿಗೆ ದೇಹದ ಸುಮಾರು 150 ಕಡೆ ಗಾಯಗಳಾಗಿದ್ದು, ಮಹಡಿಯಿಂದ ಇಳಿದರೂ ಹೆಜ್ಜೇನು ಬೆಂಬಿಡದಾಗ ಬೇರೆ ದಾರಿ‌ ಕಾಣದೆ ಕಟ್ಟಕಡೆಗೆ ಸಮೀಪದ ಬಾವಿಗೆ ಇಳಿದು ನೀರಿನಲ್ಲಿ ಮುಳುಗಿ ಸುಮಾರು ಹೊತ್ತಿನ ಬಳಿಕ ಮೇಲೆದ್ದು ಬಂದು ಜೀವ ಉಳಿಸಿಕೊಂಡಿದ್ದಾರೆ. ಪುತ್ರ ರಾಯಲ್​ ಗೂ ಸುಮಾರು 22 ಕಡೆ ಗಾಯಗಳಾಗಿದ್ದು, ಮುಖ ನೋವಿನಿಂದ ಊದಿಕೊಂಡಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಸದ್ಯ ಮನೆಯ ಸಿಟ್ ಔಟ್​ನಲ್ಲಿ ರಾಯಲ್ ಪತ್ನಿ ಹಾಗೂ ಮಗು ಕುಳಿತುಕೊಂಡಿದ್ದು, ಈ ವೇಳೆ ಮನೆ ಮಂದಿ ಎಚ್ಚರಿಸಿದ ಕಾರಣ ಮನೆಯ ಕೊಠಡಿಯೊಳಗೆ ಹೋಗಿ ರಕ್ಷಣೆ ಪಡೆದಿದ್ದಾರೆ. ಹಾಗು ಕಿಟಕಿಗಳಿಗೆ ನೆಟ್ ಹಾಕಿದ್ದರಿಂದ ಹೆಜ್ಜೇನು, ಮನೆ ಒಳಗೆ ಹೋಗುವುದಕ್ಕೆ ಆಗದೆ ಇದ್ದ ಕಾರಣ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಟಿಬೇಟಿಯನ್​ ಕ್ಯಾಂಪ್​ನಲ್ಲಿ ಹೆಜ್ಜೇನು ದಾಳಿ : ಮಾರ್ಚ್​ 4 ರಂದು ಕಾರವಾರದಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಪದಾಧಿಕಾರಿಗಳ ಅಧ್ಯಯನ ಶಿಬಿರ ನಡೆಯುವ ಸಂದರ್ಭ ಹೆಜ್ಜೇನು ದಾಳಿ ನಡೆಸಿದ್ದವು. ದಾಳಿ ನಡೆಸಿದ ಪರಿಣಾಮವಾಗಿ ಬರೋಬ್ಬರಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮುಂಡಗೋಡ ತಾಲೂಕಿನ ಟಿಬೇಟಿಯನ್​ ಕ್ಯಾಂಪ್​ನಲ್ಲಿ ಎರಡು ದಿನಗಳ ಅಧ್ಯಯನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರಕ್ಕೆ ರಾಜ್ಯದ ನಾನಾ ಭಾಗಗಳಿಂದ ಬಂದ ಸುಮಾರು 300ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಶಿಬಿರ ನಡೆಯುತ್ತಿದ್ದ ವೇಳೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದ್ದವು. ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಇದನ್ನೂ ಓದಿ :ಮಂಗಳೂರಿನಲ್ಲಿ ಏರ್​ ಕಂಡೀಷನರ್ ಫಿಟ್ ವೇಳೆ ದುರಂತ.. 9ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

ABOUT THE AUTHOR

...view details