ಉಪ್ಪಿನಂಗಡಿ (ದಕ್ಷಿಣಕನ್ನಡ):ಬಾಟಲಿಯಿಂದ ಲಾರಿ ಚಾಲಕನಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ದಸ್ತಗಿರಿ ಮಾಡಲು ಸಹಕರಿಸಿದ ಮಹಿಳಾ ಗೃಹರಕ್ಷಕ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಜೂನ್ 6ರಂದು ಬಂಟ್ವಾಳ ತಾಲೂಕಿನ ಪೆರಾಜೆ ಎಂಬಲ್ಲಿ ಮೊಹಮ್ಮದ್ ಅರಾಫತ್, ನಾಸೀರ್, ಮಹಮ್ಮದ್ ಆಸೀಫ್, ಅಫ಼್ರಿನ್ ಎಂಬುವವರು ಸೈಡ್ ಕೊಡುವ ವಿಚಾರಕ್ಕೆ ಲಾರಿ ಚಾಲಕನೊಂದಿಗೆ ಗಲಾಟೆ ನಡೆಸಿ, ಬಳಿಕ ಬಾಟಲಿಯಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು.
ಈ ವೇಳೆ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ಚೆಕ್ಪೋಸ್ಟ್ನಲ್ಲಿ ಪೊಲೀಸರು ಹಾಗು ಗೃಹರಕ್ಷಕ ಸಿಬ್ಬಂದಿ ಕುಸುಮಾ ಭಟ್ ವಾಹನವನ್ನು ತಡೆಯಲು ಯತ್ನಿಸಿದರು. ಆದರೆ, ಆರೋಪಿಗಳು ಕಾರು ನಿಲ್ಲಿಸದೇ ಪುತ್ತೂರು ಕಡೆಗೆ ಪರಾರಿಯಾಗುವ ವೇಳೆ ಸಮಯಪ್ರಜ್ಞೆ ತೊರಿಸಿದ ಗೃಹರಕ್ಷಕ ಸಿಬ್ಬಂದಿ ಕುಸುಮಾ, ಆರೋಪಿಗಳ ಕಾರಿನ ನಂಬರ್ ಕೆಎ 05, ಎನ್ಪಿ 7355 ಎಂದು ಗುರುತಿಸಿ ತಮ್ಮ ಜೊತೆಗಿದ್ದ ಪೊಲೀಸರಿಗೆ ತಿಳಿಸಿದ್ದರು. ಈ ಬಗ್ಗೆ ಕೂಡಲೇ ಪುತ್ತೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪುತ್ತೂರಿನ ಪೊಲೀಸರು ಕೆಮ್ಮಾಯಿ ಎಂಬಲ್ಲಿ ವಾಹನವನ್ನು ತಡೆದು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.