ಮಂಗಳೂರು:ಮನೆಯ ಗೋಡೆ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಇಂದು ರಾತ್ರಿ ನಗರದ ಪಡೀಲ್ ಶಿವನಗರದಲ್ಲಿ ನಡೆದಿದೆ.
ಮಂಗಳೂರಲ್ಲಿ ಮನೆ ಗೋಡೆ ಕುಸಿದು ಇಬ್ಬರು ಮಕ್ಕಳ ಸಾವು - ಪಡೀಲ್ ಶಿವನಗರ
ಮನೆಯ ಗೋಡೆ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಇಂದು ರಾತ್ರಿ ಮಂಗಳೂರಿನ ಪಡೀಲ್ ಶಿವನಗರದಲ್ಲಿ ನಡೆದಿದೆ.
ಉಪ್ಪಿನಂಗಡಿ ಮೂಲದ ಹಾಗೂ ಪ್ರಸ್ತುತ ಪಡೀಲ್‌ನ ಶಿವನಗರದ ನಿವಾಸಿ ರಾಮಣ್ಣ ಎಂಬುವರ ಮಕ್ಕಳಾದ ವರ್ಷಿಣಿ (9) ಹಾಗೂ ವೇದಾಂತ್(7) ಮೃತಪಟ್ಟ ಮಕ್ಕಳು. ರಾಮಣ್ಣ ಕಣ್ಣೂರಿನ ಸೆರಾಮಿಕ್ ಫ್ಯಾಕ್ಟರಿಯೊಂದರಲ್ಲಿ 15 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗೆ ಪಡೀಲ್‌ಗೆ ಸ್ಥಳಾಂತರಗೊಂಡಿದ್ದರು. ವರ್ಷಿಣಿ ಕಪಿತಾನಿಯ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಹಾಗೂ ವೇದಾಂತ್ ಎರಡನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ನಾಳೆ ಪರೀಕ್ಷೆ ಇದ್ದಿದ್ದರಿಂದ ಮನೆಯ ಆವರಣ ಗೋಡೆಯ ಸಮೀಪ ಮಕ್ಕಳು ಓದುತ್ತಿದ್ದರು. ಆದರೆ ರಾತ್ರಿ 7:50ರ ಸುಮಾರಿಗೆ ಮನೆ ಗೋಡೆ ಏಕಾಏಕಿ ಕುಸಿದು ಬಿದ್ದು, ಮಕ್ಕಳಿಬ್ಬರೂ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ. ಆವರಣ ಗೋಡೆಯ ಅವಶೇಷಗಳಡಿ ಸಿಲುಕಿದ್ದ ಮಕ್ಕಳನ್ನು ತಕ್ಷಣ ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಾಗಲೇ ಮಕ್ಕಳು ಮೃತಪಟ್ಟಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.ಈ ಸಂಬಂಧ ಸ್ಥಳಕ್ಕೆ ಕಂಕನಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.