ಮಂಗಳೂರು: "ಹಿಜಾಬ್ ವಿಚಾರದಲ್ಲಿ ನಾವು ಆದೇಶವೇ ಮಾಡಿಲ್ಲ. ಒಂದು ವೇಳೆ ಮಾಡಿದ್ದರೂ ಪರಿಶೀಲನೆ ಮಾಡುತ್ತೇವೆ ಎಂಬ ಮಾತನ್ನು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅದರ ಸಾಧಕ-ಬಾಧಕವನ್ನು ನೋಡಿಕೊಂಡು ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ಗೊಂದಲ ಸೃಷ್ಟಿಸುವ ಅವಶ್ಯಕತೆಯಿಲ್ಲ. ಮುಸ್ಲಿಂ ಸಮುದಾಯದವರು ಹಿಜಾಬ್ ಹಾಕಿಕೊಂಡೇ ಬರುತ್ತಾರೆ. ಬಿಜೆಪಿ ಸರ್ಕಾರ ಬಂದ ಬಳಿಕ ಈ ಗೊಂದಲ ಸೃಷ್ಟಿಯಾಗಿದೆ. ಆದ್ದರಿಂದ ಈ ಮೊದಲು ನಾವು ಯಾವ ರೀತಿ ಜೀವನ ನಡೆಸಿದೆವೋ ಅದೇ ರೀತಿ ಇದ್ದರೆ ಒಳಿತು" ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಸಂತೆ ವ್ಯಾಪಾರದಲ್ಲಿ ಧರ್ಮ ರಾಜಕಾರಣದ ವಿಚಾರಕ್ಕೆ ಪ್ರತಿಕ್ರಿಯಿಸಿ, "ಧರ್ಮ ಹಾಗೂ ಜನಸಮುದಾಯದ ಹಕ್ಕುಗಳ ವಿಚಾರಗಳಲ್ಲಿ ನಾವು ಸಂವಿಧಾನವನ್ನು ಬಿಟ್ಟು ಯಾವ ಕೆಲಸವನ್ನೂ ಮಾಡುವುದಿಲ್ಲ. ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿದ್ದರೂ ಸಂವಿಧಾನದ ಚೌಕಟ್ಟಿನೊಳಗೇ ತೆಗೆದುಕೊಳ್ಳುತ್ತೇವೆ. ಇದು ಕೆಲವರಿಗೆ ನೋವಾಗಬಹುದು. ಇನ್ನು ಕೆಲವರಿಗೆ ಸಂತೋಷವಾಗಬಹುದು" ಎಂದರು.
ನೈತಿಕ ಪೊಲೀಸ್‌ಗಿರಿ ತಡೆಗೆ ಆ್ಯಂಟಿ ಕಮ್ಯುನಲ್ ವಿಂಗ್ ಮಾಡಿದ್ದರೂ ಕಡಿವಾಣ ಬಿದ್ದಂತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಬಹಳಷ್ಟು ಕಡಿಮೆ ಆಗಿದೆ ಎಂಬುದು ನಮಗೆ ಬಂದ ಮಾಹಿತಿ. ನೈತಿಕ ಪೊಲೀಸ್ ಗಿರಿಗಳ ಸಂಖ್ಯೆ ಕಡಿಮೆಯಾಗಿದ್ದಂತೂ ಸತ್ಯ. ಸಮಾಜದಲ್ಲಿ ಸಾಮರಸ್ಯ ಇರಬೇಕು. ಅಹಿತಕರ ಘಟನೆಗಳಿಗೆ ಅವಕಾಶ ಕೊಡಬೇಡಿ. ಪೊಲೀಸ್ ಕಮಿಷನರ್, ಎಸ್ಪಿ, ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಹಾಗೆಂದು ಎಲ್ಲರ ಮೇಲೂ ಕೇಸ್ ಹಾಕಬೇಕೆಂದಲ್ಲ. ಯಾರು ನೈತಿಕ ಪೊಲೀಸ್ ಗಿರಿ ಮಾಡುತ್ತಾರೋ ಅಂಥವರ ಮೇಲೆ ಕ್ರಮ ಜರುಗಿಸಬೇಕು. ಯಾರು ನೈತಿಕ ಪೊಲೀಸ್ ಗಿರಿ ಮಾಡಿಲ್ಲವೋ ಅವರು ಯಾವುದೇ ಆತಂಕಿತರಾಗುವ ಅಗತ್ಯವಿಲ್ಲ" ಎಂದು ತಿಳಿಸಿದರು.