ಕರ್ನಾಟಕ

karnataka

ETV Bharat / state

ವಿದೇಶಿಯರ ಅಕ್ರಮ ಪ್ರವೇಶ ತಡೆಯಲು ಸದೃಢ ಕರಾವಳಿ ಕಾವಲು ಪಡೆ: ಗೃಹ ಸಚಿವ ಆರಗ ಜ್ಞಾನೇಂದ್ರ - Home minister Araga Gnanendra visite dharmasthala

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಬೇಕು. ಸರ್ಕಲ್ ಇನ್ಸ್‌ಪೆಕ್ಟರ್ ಠಾಣೆಯಾಗಿ ಮೇಲ್ದರ್ಜೆಗೇರಿಸಬೇಕು. ವಿಪತ್ತು ನಿರ್ವಹಣೆಗಾಗಿ ಅಗ್ನಿಶಾಮಕ ದಳ ಘಟಕವನ್ನು ಧರ್ಮಸ್ಥಳದಲ್ಲಿ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.

Home minister Araga Gnanendra
ಅರಗ ಜ್ಞಾನೇಂದ್ರ

By

Published : Nov 10, 2021, 5:06 AM IST

ಬೆಳ್ತಂಗಡಿ: ಕರಾವಳಿ ಮೂಲಕ ನಮ್ಮ ದೇಶಕ್ಕೆ ವಿದೇಶೀಯರ ಅಕ್ರಮ ಪ್ರವೇಶ ತಡೆಗಟ್ಟಲು ಹಾಗೂ ಶಾಂತಿ, ಸುವ್ಯವಸ್ಥೆ ಕಾಪಾಡಲು ಸದೃಢ ಕರಾವಳಿ ಕಾವಲು ಪಡೆ ಮೂಲಕ ಬಿಗಿ ಬಂದೋಬಸ್ತ್ ಮಾಡಲಾಗುವುದು. ಈ ಬಗ್ಗೆ ಈಗಾಗಲೆ 30 ಬೋಟ್‍ಗಳನ್ನು ಖರೀದಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಅವರು ಮಂಗಳವಾರ ಧರ್ಮಸ್ಥಳದಲ್ಲಿ ಎರಡು ಕೋಟಿ ಮೂವತ್ತು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಆರಗ ಜ್ಞಾನೇಂದ್ರ
ಸ್ಯಾಟ್​ಲೈಟ್ ಫೋನ್ ಬಳಕೆ ಹಾಗೂ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಅಪರಾಧ ಪತ್ತೆ ಘಟಕಗಳನ್ನು ಪ್ರಾರಂಭಿಸಲಾಗುವುದು. ಸಂಚಾರಿ ಎಫ್.ಎಸ್.ಎಲ್. ಪ್ರಯೋಗಾಲಯ, ಸಂಚಾರಿ ವಾಹನ ಹಾಗೂ ಗಸ್ತು ಪಡೆ ನಿಯೋಜನೆಯೊಂದಿಗೆ ಅಪರಾಧ ಪ್ರಕರಣಗಳನ್ನು ತಡೆಗಟ್ಟಲಾಗುವುದು. ಈ ಬಗ್ಗೆ ಪೊಲೀಸರಿಗೆ ಸಾರ್ವಜನಿಕರ ಸಕ್ರಿಯ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಈಗಾಗಲೆ ಉಪನಿರೀಕ್ಷಕರ ಹುದ್ದೆಗಾಗಿ 950 ಮಂದಿಗೆ ಸಂದರ್ಶನ ನಡೆಸಿದ್ದು ಸದ್ಯದಲ್ಲೇ ನೇಮಕಾತಿ ಆದೇಶ ನೀಡಲಾಗುವುದು ಎಂದು ಅವರು ಪ್ರಕಟಿಸಿದರು. ಎರಡು ವರ್ಷದೊಳಗೆ ಪೊಲೀಸರಿಗೆ 11,000 ಮನೆಗಳನ್ನು ನಿರ್ಮಿಸಲಾಗುವುದು. 140 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. ಪೊಲೀಸರ ಮಕ್ಕಳ ಶಿಕ್ಷಣಕ್ಕೂ ವಿಶೇಷ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.

ವೀರೇಂದ್ರ ಹೆಗ್ಗಡೆಯವರಿಂದ ಕ್ರಾಂತಿಕಾರಕ ಸಾಮಾಜಿಕ ಪರಿವರ್ತನೆ

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕ್ರಾಂತಿಕಾರಿ ಸಾಮಾಜಿಕ ಪರಿವರ್ತನೆ ಮಾಡಿದ್ದಾರೆ. ಆರ್ಥಿಕ ಶಿಸ್ತು, ಮಹಿಳಾ ಸಬಲೀಕರಣ, ಪ್ರಕೃತಿ-ಪರಿಸರ ಸಂರಕ್ಷಣೆ, ಕೆರೆಗಳಿಗೆ ಕಾಯಕಲ್ಪ, ವ್ಯಸನಮುಕ್ತ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಇತ್ಯಾದಿ ಹತ್ತು - ಹಲವು ಕಾರ್ಯಕ್ರಮಗಳ ಮೂಲಕ ಮಾಡಿದ ಸುಧಾರಣೆ ಹಾಗೂ ಪ್ರಗತಿಪರ ಸೇವಾ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿಯವರೇ ಮೆಚ್ಚಿ ಅಭಿನಂದಿಸಿದ್ದಾರೆ ಎಂದು ಸಚಿವರು ಹೇಳಿದರು. ಸರ್ಕಾರ ಮಾಡಬೇಕಾದ ಕೆಲಸವನ್ನು ಹೆಗ್ಗಡೆಯವರು ಮಾಡಿದ್ದಾರೆ. ಇದರಿಂದಾಗಿ ಜನರಲ್ಲಿ ಶಿಸ್ತು, ಸಂಯಮ, ಸೇವಾ ಕಳಕಳಿ, ದಯೆ, ಅನುಕಂಪ, ಸ್ವಾವಲಂಬನೆ ಮೊದಲಾದ ಮಾನವೀಯ ಮೌಲ್ಯಗಳು ಮೂಡಿ ಬಂದಿದ್ದು ಸಮಾಜದಲ್ಲಿ ಶಾಂತಿ, ನೆಮ್ಮದಿ ಉಂಟಾಗಿದೆ. ಅಪರಾಧಗಳು ಕಡಿಮೆಯಾಗಿವೆ ಎಂದು ಅವರು ಹೇಳಿದರು..

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಬೇಕು. ಸರ್ಕಲ್ ಇನ್ಸ್‌ಪೆಕ್ಟರ್ ಠಾಣೆಯಾಗಿ ಮೇಲ್ದರ್ಜೆಗೇರಿಸಬೇಕು. ವಿಪತ್ತು ನಿರ್ವಹಣೆಗಾಗಿ ಅಗ್ನಿಶಾಮಕ ದಳ ಘಟಕವನ್ನು ಧರ್ಮಸ್ಥಳದಲ್ಲಿ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು. ಮುಖ್ಯ ಅಭಿಯಂತರ ಎನ್.ಜಿ. ಗೌಡಯ್ಯ ಮತ್ತು ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಾ ಮೋನಪ್ಪ ಗೌಡ ಉಪಸ್ಥಿತರಿದ್ದರು.

ABOUT THE AUTHOR

...view details